ರಸ್ತೆ ಮಧ್ಯೆ ನೀರಿನ ಪೈಪ್ ‌ಸೋರಿಕೆ ; ಸಮಸ್ಯೆ ಬಗೆಹರಿಸಲು ಹೆಣಗಾಡುತ್ತಿದೆ ತಿಪಟೂರು ನಗರಸಭೆ

Pipeline
Published on

ತಿಪಟೂರು: ನಗರದ ಪ್ರಮುಖ ರಸ್ತೆ ಮಧ್ಯೆ ಕುಡಿವ ನೀರು ಸೋರಿಕೆ ತಡೆಯಲು ನಗರಸಭೆ ಹೆಣಗಾಡುತ್ತಿದೆ.

ನಗರದ ಹಳೇಪಾಳ್ಯ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಮತ್ತು ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಧ್ಯದಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್ ಸೋರಿಕೆ ಸಮಸ್ಯೆ ಮೂವರು ನಗರಾಯುಕ್ತರು ಬಂದು ಹೋಗಿದ್ದರೂ ಪರಿಹಾರವಾಗಿಲ್ಲ.

ರಸ್ತೆ ಮಧ್ಯದ ಗುಂಡಿಗೆ ಬಿದ್ದು ಅನೇಕರು ಆಸ್ಪತ್ರೆ ಸೇರಿದ್ದಾರೆ. ಡಿಪೋಗೆ ಹೋಗಿಬರುವ ಸಾರಿಗೆ ಬಸ್ ಚಾಲಕರು ಸೇರಿ ಇತರ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿರುವ ಕಾರಣ ಅಪಫಾತಗಳ ಸಂಖ್ಯೆ ಹೆಚ್ಚಾಗಿದೆ. ಮಾಧ್ಯಮಗಳು ಗಮನ ಸೆಳೆದಾಗ ನಾಮ್ ಕೇ ವಾಸ್ತೆಗೆ ದುರಸ್ತಿ ಮಾಡಿ, ಗುಂಡಿ ಮೇಲೆ ಆಳೆತ್ತರಕ್ಕೆ ಮಣ್ಣು ಮುಚ್ಚಿ ಹೋಗುವುದು. ಪುನಃ ನೀರು ಸೋರಿಕೆಯಾಗಿ ಗುಂಡಿ ನಿರ್ಮಾಣವಾಗುವುದು ಮಾಮೂಲಿಯಾಗಿದೆ. ಒಂದು ಕಡೆ 4 ಇಂಚಿನ ಪೈಪ್ ಮತ್ತೊಂದು ಕಡೆ 6 ಇಂಚಿನ ಪೈಪ್‌ಗಳು ಹೋಗಿರುವುದರಿಂದ ಜಾಯಿಂಟ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಗರಸಭೆಯವರು.

ಹಳೆಯ ಪೈಪ್‌ಗೆ ತೇಪೆ ಹಾಕಿ ಹೋಗವ ಬದಲು ಹೊಸ ಪೈಪ್‌ಲೈನ್ ಅಳವಡಿಸುವ ಚಿಂತನೆ ಮಾಡಿಲ್ಲ. ಕಂದಾಯ ಬಾಕಿ ಇದ್ದರೆ ಮುಲಾಜಿಲ್ಲದೇ ಬಡ್ಡಿ, ಮತ್ತು ದಂಡ ವಿಧಿಸುವುದು, ಅಪರೂಪಕ್ಕೆ ನೀರು ಬಿಟ್ಟರೂ, ಸಕಾಲದಲ್ಲಿ ನೀರಿನ ಕರ ಕಟ್ಟಿಲ್ಲ ಎಂದು ನೀರಿನ ಸಂಪರ್ಕ ಬಂದ್ ಮಾಡುವಲ್ಲಿ ದಕ್ಷತೆ ತೋರಿಸುವ ನಗರಸಭೆಗೆ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮನಸಾಗಿಲ್ಲ. ಇನ್ನು ಗುರುವಾರ ರಾತ್ರಿ ಸುರಿದ ಮಳೆಗೆ ನಗರದ ಕೆಲವೆಡೆ ಚರಂಡಿಗಳು ಕಟ್ಟಿ, ಕಲುಷಿತ ನೀರು ರಸೆ ್ತ ಹಾಗೂ ಮನೆಗಳಿಗೆ ನುಗ್ಗಿದೆ. ಸಮಸ್ಯೆ ಬಗೆಹರಿಸಬೇಕಾದ ನಗರಾಯುಕ್ತರು ಸಂಪರ್ಕಕ್ಕೆ ಸಿಕ್ಕಿಲ್ಲ.

ನಗರಸಭೆಯ ಅಧಿಕಾರಿಗಳಿಗೆ ವರ್ಷಗಳಿಂದ ಕಾಡುತ್ತಿರುವ ಜ್ವಲಂತ ಸಮಸ್ಯೆಗೆ ಮುಕ್ತಿ ಕಾಣಿಸಲು ಸಾಧ್ಯವಾಗಿಲ್ಲ, ಶಾಸಕರ ಗಮನಕ್ಕೂ ಬಾರದಿರುವುದು ತಿಪಟೂರಿನ ದೌರ್ಭಾಗ್ಯ. ರಾಜಶೇಖರ್ ಗುತ್ತಿಗೆದಾರ ಅರಳೀಕಟ್ಟೆ 3,4, ಮತ್ತು 6 ಇಂಚಿನ ವಿವಿಧ ಅಳತೆಯ ಕಬ್ಬಿಣ ಮತ್ತು ಪೈಪ್‌ಗಳ ಜೋಡಣೆ ಮಾಡಿರುವುದರಿಂದ ನೀರಿನ ಒತ್ತಡ ಹೆಚ್ಚಾಗಿ, ಸೋರಿಕೆಯಾಗುತ್ತಿದೆ. ದುರಸ್ತಿ ಕಾರ್ಯ ನಡೆದಿದೆ. ಹೆಸರು ಹೇಳಲು ಇಚ್ಛಿಸದ ನಗರಸಭೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net