ನೀರು ಪಾಲಾಗಿದ್ದ ಮಹಿಳೆ ಶವ ಪತ್ತೆ

0101
Published on

ನಂದೇಶ್ವರ: ಹಿಪ್ಪರಗಿ ಡ್ಯಾಂ ಪಕ್ಕದಲ್ಲಿ ಕೃಷ್ಣಾ ನದಿ ದಾಟುವಾಗ ತೆಪ್ಪ ಮುಗುಚಿ ಶನಿವಾರ ನೀರುಪಾಲಾಗಿದ್ದ ಮಹಿಳೆಯ ಶವ ಭಾನುವಾರ ಪತ್ತೆಯಾಗಿದೆ. ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಪ್ರೇಮಾ ಯಮನಪ್ಪ ಮಾಂಗ (30) ಮೃತ ದುರ್ದೈವಿ.

ಶನಿವಾರ ರಾತ್ರಿವರೆಗೂ ಶೋಧ ಕಾರ್ಯ ಕೈಗೊಂಡರೂ ಶವ ದೊರೆತಿರಲಿಲ್ಲ. ಭಾನುವಾರ ಮೃತಳ ಸಂಬಂಧಿಕರು ಶವ ಹೊರ ತೆಗೆದಿದ್ದಾರೆ. ಅಥಣಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಇದ್ದರು. ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಮೃತ ಮಹಿಳೆಗೆ ಪತಿ, 18 ತಿಂಗಳ ಮಗು ಸೇರಿ ಮೂವರು ಮಕ್ಕಳಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬಂದ್ ಆಗಿದ್ದರಿಂದ ಜೀವ ಬಲಿ?: ಹಿಪ್ಪರಗಿ ಡ್ಯಾಂ ಮೇಲಿನ ರಸ್ತೆಯನ್ನು ಕರೊನಾ ವೈರಸ್ ಹರಡುವ ಭೀತಿಯಿಂದ ಬಂದ್ ಮಾಡಲಾಗಿತ್ತು. ಇದರಿಂದ ಸವದಿ-ದರ್ಗಾ ಗ್ರಾಮದ ಒಂದು ಬದಿಗೆ ಹಾಗೂ ಹಿಪ್ಪರಗಿ ಗ್ರಾಮದ ಒಂದು ಬದಿಗೆ ಹಗ್ಗ ಕಟ್ಟಿ ಜನರನ್ನು ತೆಪ್ಪದಲ್ಲಿ ಸಾಗಿಸಲಾಗುತ್ತಿತ್ತು. ಅನಾರೋಗ್ಯ ಪೀಡಿತ ಸಂಬಂಧಿಕರ ಆರೋಗ್ಯ ವಿಚಾರಿಸಲು ಹಿಪ್ಪರಗಿ ಗ್ರಾಮಕ್ಕೆ ತೆರಳಿ ಮರಳಿ ಸ್ವಗ್ರಾಮಕ್ಕೆ ತೆಪ್ಪದಲ್ಲಿ ಕುಳಿತು ಆಗಮಿಸುವಾಗ ತೆಪ್ಪ ಮುಗುಚಿ ಮಹಿಳೆ ನೀರು ಪಾಲಾಗಿದ್ದಳು.

ರಸ್ತೆ ಬಂದ್ ಆಗಿದ್ದರಿಂದ ನೀರು, ಹಾಲು, ದಿನಸಿ, ಆಸ್ಪತ್ರೆ ಸೇರಿ ತುರ್ತು ಸೇವೆಗೆ ತೊಂದರೆಯಾಗುತ್ತಿದೆ. ಈ ಕುರಿತು ಸಾರ್ವಜನಿಕರು ಅಧಿಕಾರಿಗಳಿಗೆ ಅಂಗಲಾಚಿದರೂ ಸ್ಪಂದಿಸಲಿಲ್ಲ. ಇದು ಮಹಿಳೆಯ ಜೀವ ಹೋಗಲು ಕಾರಣವಾಗಿದೆ ಎಂದು ಜನವಾಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net