

ಚಿಕ್ಕನಾಯಕನಹಳ್ಳಿ: ಕುಂದೂರು ಹೇಮಾವತಿ ನಾಲೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ ಪೈಪ್‌ಲೈನ್ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಒಡೆದಿದ್ದು, ನೀರು ಪೋಲಾಗುತ್ತಿದೆ. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಪೈಪ್ ಹಾಳಾಗಿ ನೀರು ಸೋರಿಕೆಯಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ.
20 ಲಕ್ಷ ಲೀಟರ್ ನೀರು ಸೋರಿಕೆ: ಪಟ್ಟಣದ ನಾಗರಿಕರಿಗೆ ದಿನಕ್ಕೆ ಅಂದಾಜು 33.75 ಲಕ್ಷ ಲೀಟರ್ ನೀರು ಅಗತ್ಯ ಇದೆ. ನಿತ್ಯ 90 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗುತ್ತಿದೆ. ಸೋರಿಕೆಯಿಂದ ನಿತ್ಯ 20 ಲಕ್ಷ ಲೀಟರ್ ನೀರು ವ್ಯರ್ಥವಾಗಿ 70 ಲಕ್ಷ ಲೀಟರ್ ನೀರು ಲಭ್ಯವಾಗುತ್ತಿದೆಯಾದರೂ ಅದನ್ನು ಶುದ್ಧೀಕರಿಸುವ ವೇಳೆ ಶೇ.30 ವ್ಯರ್ಥವಾಗುತ್ತದೆ. ಇದರಿಂದ ನಾಗರಿಕರಿಗೆ ಕುಡಿಯಲು ನೀರು ಸಾಲುತ್ತಿಲ್ಲ.
ವಾಣಿಜ್ಯ ಬಳಕೆ: ಪುರಸಭೆ ಕೇವಲ ಕುಡಿಯಲು ಹಾಗೂ ಸ್ನಾನಕ್ಕೆ ನೀರನ್ನು ಶುದ್ಧೀಕರಿಸಿ ಪೂರೈಸುತ್ತಿದೆ. ಇದಕ್ಕಾಗಿ ನಾಗರಿಕರಿಂದ ಪುರಸಭೆ ಪ್ರತಿ ತಿಂಗಳು 80 ರೂಪಾಯಿ ಕರ ವಸೂಲಿ ಮಾಡುತ್ತಿದೆ. ಆದರೆ ಪಟ್ಟಣದಲ್ಲಿ ಬಹುತೇಕ ಮಂದಿ ವಾಣಿಜ್ಯ ಚಟುವಟಿಕೆಗಳಿಗೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಕೊಳಾಯಿಗಳಲ್ಲಿ 24 ತಾಸು ನಿರಂತರವಾಗಿ ನೀರು ಹರಿಯುತ್ತಿದೆ. ಇದನ್ನು ಪತ್ತೆ ಮಾಡಿ ತಡೆಗಟ್ಟಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ತುಂಬದ ಕೆರೆ : ಪಟ್ಟಣಕ್ಕೆ ಕುಡಿಯಲು ಪೂರೈಕೆಯಾಗುವ ಹೆಚ್ಚುವರಿ ನೀರನ್ನು ಚಿಕ್ಕನಾಯನಹಳ್ಳಿ ಕೆರೆಗೆ ಬಿಟ್ಟು ಸಂಗ್ರಹಿಸುವ ವ್ಯವಸ್ಥೆ ಕೂಡ ಮಾಡಲಾಗಿತ್ತು. ಹೀಗಾಗಿ 60 ಮೆಟ್ರಿಕ್ ಕ್ಯೂಬಿಕ್ ಅಡಿ ನೀರು ಹಂಚಿಕೆಯಾಗಿತ್ತು. ಆದರೆ ಸದ್ಯ ದೊರೆಯುತ್ತಿರುವುದು 30 ಮೆಟ್ರಿಕ್ ಕ್ಯೂಬಿಕ್ ಅಡಿ ನೀರು ಮಾತ್ರ. ಹೀಗಾಗಿ ಹೆಚ್ಚುವರಿ ನೀರು ಕೂಡ ಕೆರೆಗೆ ಬರುತ್ತಿಲ್ಲ. ಸೋರಿಕೆಯಿಂದ ವ್ಯರ್ಥವಾಗುತ್ತಿದೆ.
ಸೋರಿಕೆಯಾಗುತ್ತಿರುವ ನೀರನ್ನು ಹಲವು ಬಾರಿ ಸರಿಪಡಿಸಲಾಗಿತ್ತು. ಮತ್ತೆ ಸೋರಿಕೆಯಾಗುತ್ತಿದೆ. ಇದರ ಹಿಂದೆ ಕಿಡಿಗೇಡಿಗಳ ಕೈವಾಡ ಇರಬಹುದು. ಪೊಲೀಸರಿಗೆ ದೂರು ನೀಡಲಾಗಿದೆ. ಹೀಗಿದ್ದರೂ ಕಿಡಿಗೇಡಿಗಳ ಕೃತ್ಯ ತಡೆಯಲು ಸಾಧ್ಯವಾಗುತ್ತಿಲ್ಲ. ಪಟ್ಟಣಕ್ಕೆ ನಿತ್ಯ 20 ಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಯೋಗೇಂದ್ರಬಾಬು ಪುರಸಭಾ ಇಂಜಿನಿಯರ್ ಪುರಸಭೆ ಅಧಿಕಾರಿಗಳು ನೀರು ಸೋರಿಕೆ ತಡೆಗಟ್ಟಿ ಚಿಕ್ಕನಾಯಕನಹಳ್ಳಿ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕು. ಪೈಪ್ ಹಾನಿ ಮಾಡುವ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಬೇಕು. ಉಪ್ಪಿನ ನಾಗರಾಜು ಚಿಕ್ಕನಾಯಕನಹಳ್ಳಿ