

ಉಪ್ಪಿನಂಗಡಿ : ನೇತ್ರಾವತಿ ನದಿಯ ಬಿಳಿಯೂರು ಅಣೆಕಟ್ಟಿನ ಗೇಟು ಅಳವಡಿಕೆಯಲ್ಲಿ ಲೋಪವಾಗಿರುವುದರಿಂದ ಭಾರಿ ಪ್ರಮಾಣದ ನೀರು ಸೋರಿಕೆಯಾಗುತ್ತಿರುವ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಳಿಯೂರು ಅಣೆಕಟ್ಟಿನಲ್ಲಿ ನಾಲ್ಕು ಮೀಟರ್ ಎತ್ತರದ ಗೇಟು ಅಳವಡಿಸಲಾಗಿದ್ದು, ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ವರೆಗೆ ನೇತ್ರಾವತಿ ನದಿಯಲ್ಲಿ ಹಿನ್ನೀರು ಸಂಗ್ರಹವಾಗುವಂತಾಗಿದೆ. ಈ ಬಾರಿ ಅಣೆಕಟ್ಟಿನ ಗೇಟು ಅಳವಡಿಕೆಯ ಕಾರ್ಯದಲ್ಲಿ ಲೋಪವುಂಟಾಗಿ ದೊಡ್ಡ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಪ್ರಸಕ್ತ ನದಿಯಲ್ಲಿ ನೀರಿನ ಹರಿವು ಇದ್ದು, ಅಣೆಕಟ್ಟಿನಲ್ಲಿ ನೀರು ತುಂಬಿ ದುಮ್ಮಿಕ್ಕಿ ಹರಿಯುತ್ತಿದೆ. ಜೊತೆಗೆ ಗೇಟು ಅಳವಡಿಕೆಯ ಕೆಳ ಭಾಗದಲ್ಲಿ ದೊಡ್ದ ಪ್ರಮಾಣದಲ್ಲಿ ನೀರಿನ ಸೋರಿಕೆಯುಂಟಾಗಿದ್ದು, ಇದು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಿನ್ನೀರಿನ ಸಂಗ್ರಹದಲ್ಲಿ ವ್ಯತ್ಯಯ ಉಂಟಾಗಲಿದೆ.
ಅಣೆಕಟ್ಟಿನ ನೀರಿನ ಸೋರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಅನಂತ ಪ್ರಸಾದ್ ನೈತಡ್ಕ , ಗೇಟು ಅಳವಡಿಸುವ ಸಮಯದಲ್ಲಿ ಮರದ ಕುತ್ತಿಯೊಂದು ಸಿಲುಕಿಕೊಂಡಿತ್ತು. ಅದನ್ನು ತೆರವುಗೊಳಿಸಿದ ಬಳಿಕವೇ ಗೇಟು ಅಳವಡಿಸಿ ಎಂದು ಸಲಹೆ ನೀಡಿದ್ದೆವು. ಗೇಟು ಅಳವಡಿಸಿದ ಬಳಿಕ ತೆರವುಗೊಳಿಸಲು ಸಾಧ್ಯ ಎಂದು ಪ್ರತಿಪಾದಿಸಿ ಗೇಟು ಅಳವಡಿಸಿ ಮರದ ಕುತ್ತಿಯನ್ನು ತೆರವುಗೊಳಿಸಲು ಮುಂದಾದರು. ಆದರೆ ಈಗ ದೊಡ್ಡ ಪ್ರಮಾಣದಲ್ಲಿ ನೀರು ಹೊರಗೆ ಹರಿದು ಹೋಗುವಂತಾಗಿದೆ ಎಂದು ತಿಳಿಸಿದ್ದಾರೆ.