

ಪುತ್ತೂರು: ಪುತ್ತೂರು ತಾಲೂಕಿನ 41 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಟಾಸ್ಕ್‌ಫೋರ್ಸ್ ವತಿಯಿಂದ ಹೊಸ ಸಾರ್ವಜನಿಕ ಕೊಳವೆಬಾವಿ ತೆರೆಯುವಂತೆ ಅಭಿವೃದ್ಧಿ ಅಧಿಕಾರಿಗಳಿಂದ ಆಗ್ರಹ ವ್ಯಕ್ತವಾಯಿತು.
ಮಿನಿವಿಧಾನಸೌಧದ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಕರೊನಾ ಮುಂಜಾಗರೂಕತೆ ವಿಚಾರವಾಗಿ ಪುತ್ತೂರು ಕಂದಾಯ ವಿಭಾಗದ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
ತಾಲೂಕಿನ ಆರ್ಯಾಪು, ಅರಿಯಡ್ಕ, ಬನ್ನೂರು, ಕೆಯ್ಯೂರು, ಕಬಕ ಸೇರಿದಂತೆ ಬಹುತೇಕ ಗ್ರಾಪಂಗಳಲ್ಲಿ ಕೊಳವೆಬಾವಿಯ ಅವಶ್ಯಕತೆ ಇದೆ ಎಂದು ಅಭಿವೃದ್ಧಿ ಅಧಿಕಾರಿಗಳು ಗಮನ ಸೆಳೆದರು. ಇನ್ನು ಕೆಲವು ಗ್ರಾಪಂಗಳಲ್ಲಿ ಕೊಳವೆಬಾವಿ ಇದ್ದರೂ ವಿದ್ಯುತ್ ಪವರ್ ಸಮಸ್ಯೆಯಿಂದ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಮೇವಿನ ಸಮಸ್ಯೆ: ತಾಲೂಕಿನ ಕೆಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದೆ. ತಾಲೂಕಿಗೆ ಒಣಮೇವು ಸಕಲೇಶಪುರ ಹಾಗೂ ಹಾಸನದಿಂದ ಸರಬರಾಜುಗೊಳ್ಳುತ್ತಿತ್ತು. ಆದರೆ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ ಒಣ ಮೇವು ಬರುತ್ತಿಲ್ಲ. ಹಾಗಾಗಿ ಜಾನುವಾರುಗಳ ಸಾಕಾಣೆ ಕಷ್ಟವಾಗುತ್ತಿದೆ ಎಂದು ಜನತೆ ದೂರುತ್ತಿದ್ದಾರೆ ಎಂದು ಪಿಡಿಒ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಉಪವಿಭಾಗಾಧಿಕಾರಿ, ಒಣ ಮೇವು ತರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಎಂಎಫ್ ವತಿಯಿಂದ ಒಣ ಮೇವು ತರುವ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಇವರ ದರದಲ್ಲಿ ಟೆಂಡರ್ ಪಡೆದುಕೊಂಡಿಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎಂದರು.
ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ತಹಸೀಲ್ದಾರ್ ರಮೇಶ್ ಬಾಬು ಇದ್ದರು.
25ರಿಂದ ಕೇಂದ್ರದ ಅಕ್ಕಿ ವಿತರಣೆ: ಪುತ್ತೂರು ತಾಲೂಕಿನಲ್ಲಿ ಒಟ್ಟು 41112 ಬಿಪಿಎಲ್ ಕಾರ್ಡುದಾರರಿದ್ದಾರೆ. 3995 ಅಂತ್ಯೋದಯ ಕಾರ್ಡುದಾರರಿದ್ದಾರೆ. ಇವರಿಗೆ ರಾಜ್ಯ ಸರ್ಕಾರದ ವತಿಯಿಂದ ಪಡಿತರ ವಿತರಣೆ ನಡೆದಿದೆ. ಇದರಲ್ಲಿ 11466 ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಲಾಗಿದೆ. 14984 ಮಂದಿ ಎಪಿಎಲ್ ಕಾರ್ಡುದಾರರು ಅಕ್ಕಿ ಬೇಡ ಎಂಬ ಸೂಚನೆಯನ್ನು ಆರಂಭದಲ್ಲಿಯೇ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಸದ್ಯ ಪಡಿತರ ನೀಡಲು ಸಾಧ್ಯವಾಗುವುದಿಲ್ಲ ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದರು.