ಹಂಗಳ ಹಿರೀಕೆರೆಗೆ ಹರಿದು ಬರುತ್ತಿದೆ ನೀರು

20-GPT-1
ಗುಂಡ್ಲುಪೇಟೆ ತಾಲೂಕಿನ ಹಿರೀಕೆರೆಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ಹಂಗಳದ ಹಿರೀಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದೆ.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾಡಿನೊಳಗಿನ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು, ಕೋಡಿಯಿಂದ ಹೊರಬಂದ ನೀರು ಹಳ್ಳಕೊಳ್ಳಗಳ್ಳು ಮೂಲಕ ಹರಿದು ಹೊರಬರುತ್ತಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ ದನಟ್ಟಿ ಪ್ರದೇಶದಿಂದ ಮಾವಿನ ಮರದ ಹಳ್ಳದ ಮೂಲಕ ಹಾಗೂ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಸೋನಾಪುರ ಪ್ರದೇಶದಿಂದ ಹಿರೀಕೆರೆಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಬತ್ತಿಹೋಗಿದ್ದ ಕೆರೆಯಲ್ಲಿ ನೀರು ನಿಧಾನವಾಗಿ ತುಂಬಿಕೊಳ್ಳುತ್ತಿದ್ದು, ಕೋಡಿ ಬೀಳಲು ಒಂದು ಅಡಿ ಮಾತ್ರ ಬಾಕಿಯುಳಿದಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರೀಕೆರೆ ಹಂಗಳ ಹೋಬಳಿಯ ಪ್ರಮುಖ ಜಲಮೂಲವಾಗಿದೆ. ಕಳೆದ ವರ್ಷ ಮಳೆ ಬೀಳದೆ ಹಿರೀಕೆರೆ ಸಂಪೂರ್ಣ ಬತ್ತಿ ಹೋಗಿದ್ದರಿಂದ ಈ ಭಾಗದ ಕೊಳವೆಬಾವಿಗಳಲ್ಲಿ ನೀರಿನ ಕೊರತೆಯುಂಟಾಗಿತ್ತು. ಇದರಿಂದ ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದರು. ಹಂಗಳ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು.

ಸದ್ಯ ಅರಣ್ಯ ಪ್ರದೇಶಕ್ಕೆ ಉತ್ತಮ ಮಳೆಬಿದ್ದು ಹಿರೀಕೆರೆ ತುಂಬುತ್ತಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಸೋನೆ ಮಳೆ ನಡುವೆಯೂ ಗ್ರಾಮಸ್ಥರು ಕೆರೆಗೆ ನೀರು ಹರಿದುಬರುವುದನ್ನು ನೋಡಲು ಮುಗಿಬೀಳುತ್ತಿದ್ದಾರೆ. ಕೆರೆ ಕೋಡಿ ಬಿದ್ದರೆ ಗಂಗಾ ಪೂಜೆ ನೆರವೇರಿಸಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net