ಹೆದ್ದಾರಿ, ಬಡಾವಣೆಗಳಿಗೆ ನುಗ್ಗಿದ ನೀರು

20_05_2025_BGR_RURAL_FLAP_6B
Published on

ನೆಲಮಂಗಲ : ನಗರ ಸೇರಿ ತಾಲೂಕಿನಾದ್ಯಂತ ಭಾನುವಾರ ಸುರಿದ ಭಾರಿ ಮಳೆಗೆ ರಾ.ಹೆದ್ದಾರಿ ಹಾಗೂ ಕೆಲ ವಸತಿ ಬಡಾವಣೆಗಳು ಜಲಾವೃತಗೊಂಡಿದ್ದವು.

ಭಾನುವಾರ ತಡರಾತ್ರಿ ಆರಂಭವಾದ ಮಳೆ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಬಿಡದೇ ಸುರಿದ ಪರಿಣಾಮ ನಗರದ ಎಂ.ಜಿ.ರಸ್ತೆ, ಗಜಾರಿಯ ಬಡಾವಣೆ, ವಾಜರಹಳ್ಳಿ ರಸ್ತೆ, ಭೈರವೇಶ್ವರ ಬಡಾವಣೆ, ಚೆನ್ನಪ್ಪ ಬಡಾವಣೆ, ಮುಕ್ತನಾಥೇಶ್ವರ ದೇಗುಲದ ವಸತಿ ಬಡಾವಣೆಗಳು ಜಲಾವೃತಗೊಂಡಿದ್ದವು. ರಾಜಕಾಲುವೆಗಳು ತುಂಬಿ ಹರಿದು, ಇಕ್ಕೆಲಗಳಲ್ಲಿನ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಮಳೆ ನೀರು ಮನೆಯ ಮುಂಭಾಗದ ತೊಟ್ಟಿಗೆ ಹರಿದು ಬಂದಿದ್ದರಿಂದ ನೀರಿನ ಜತೆಗ ಜಲಚರಗಳ ಆಗಮನದ ಭೀತಿಯಿಂದಾಗಿ ರಾತ್ರಿ ಜಾಗರಣೆ ಮಾಡುವಂತಾಗಿತ್ತು.

ವಸತಿ ಪ್ರದೇಶಗಳು ಜಲಾವೃತಗೊಂಡಿದ್ದನ್ನು ಮೊಬೈಲ್​ನಲ್ಲಿ ಚಿತ್ರ ತಗೆದು, ಜನಪ್ರತಿನಿಧಿಗಳಿಗೆ ನಗರಸಭೆ ಅಧಿಕಾರಿಗಳಿಗೆ ಜನ ಕಳುಹಿಸಲಾರಂಭಿಸಿದ್ದಾರೆ. ಅಲ್ಲದೇ ರಾಜಕಾಲುವೆ ಒತ್ತುವರಿಯಿಂದಾಗಿಯೇ ಮಳೆಯ ನೀರು ವಸತಿಪ್ರದೇಶಗಳಿಗೆ ನುಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಸಮುದ್ರ ತೀರದಂತಾದ ರಾಷ್ಟ್ರೀಯ ಹೆದ್ದಾರಿಗಳು : ಭಾನುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಿನ್ನಮಂಗಲ ಕೆರೆಯಿಂದ ದಾಸನಪುರ ಕೆರೆಗೆ ಹರಿದು ಹೋಗಬೇಕಾದ ಮಳೆ ನೀರು ತುಮಕೂರು&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಂಡರ್​ ಪಾಸ್​ಗಳಿಗೆ ನುಗ್ಗಿದ್ದು, ರಸ್ತೆಗಳು ಸಮುದ್ರದ ತೀರಗಳಂತಾದವು.

ಸವಾರರ ಪರದಾಟ : ತಾಲೂಕಿನ ಅರಿಶಿನಕುಂಟೆ, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ, ಅಡಕಮಾರನಹಳ್ಳಿ ಬಳಿ ಭಾನುವಾರ ರಾತ್ರಿ ಸುರಿದ ಮಳೆ ನೀರಿನಿಂದ ತುಂಬಿ ಹೋಗಿದ್ದ ಅಂಡರ್​ ಪಾಸ್​ ದಾಟಲು ದ್ವಿಚಕ್ರವಾಹನ, ಕಾರು ಚಾಲಕರು ಪರದಾಡಬೇಕಾಯಿತು.

ಮುಂದುವರಿದ ಆರ್ಭಟ : ರಾತ್ರಿಯಿಡೀ ಸುರಿದ ಬಾರಿ ಮಳೆಯಿಂದಾಗಿ ಅವಾಂತರಕ್ಕೆ ಕಾರಣವಾಗಿತ್ತಲ್ಲದೇ ಸೋಮವಾರ ಮಧ್ಯಾಹ್ನ ಹಾಗೂ ಸಂಜೆಯೂ ಮಳೆ ಸುರಿದಿದ್ದು, ಆರ್ಭಟ ಮುಂದುವರಿದಿದೆ. ಮುಂಬರುವ ಮೂರು ದಿನಗಳು ಬಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಜನಪ್ರತಿನಿಧಿ, ಅಧಿಕಾರಿಗಳು ಸ್ಥಳಕ್ಕೆ ದೌಡು : ಭಾನುವಾರ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದ ಸ್ಥಳಗಳಿಗೆ ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಭೇಟಿ ನೀಡಿದ್ದು, ಹಾನಿಯಾಗಿರುವುದರ ಬಗ್ಗೆ ನಾಗರಿಕರಿಂದ ಮಾಹಿತಿ ಸಂಗ್ರಹಿಸಿದರು.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಪ್ರತಿ ವರ್ಷದಂತೆ ಈ ಬಾರಿಯೂ ನಗರದ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಕ್ರಮವಹಿಸಲಾಗುತ್ತಿತ್ತು. ಆದರೆ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮುಂಚೆಯೇ ಮಳೆಯಾಗಿದೆ. ಶ್ರೀ ಕ್ರಮವಹಿಸಿ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. | ಎಚ್​.ಎಂ.ಮನುಕುಮಾರ್​ ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net