ತೊರ್ಕೆ ಗ್ರಾಪಂನ ಪ್ರತಿ ಮನೆಗೂ ನಲ್ಲಿ ನೀರು

3gkn1-a2-
Published on

ಗೋಕರ್ಣ: ವ್ಯವಸ್ಥಿತ ನಗರ ಪ್ರದೇಶಗಳಲ್ಲೇ ಮನೆ ಮನೆಗೆ ನೀರು ಕೊಡುವುದು ಕಷ್ಟ ಸಾಧ್ಯವಿರುವ ಈ ದಿನಗಳಲ್ಲಿ ಗೋಕರ್ಣ ಬಳಿಯ ತೊರ್ಕೆ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಎಲ್ಲ ಮನೆಗಳಿಗೆ ಕುಡಿಯುವ ನೀರು ಮುಟ್ಟಿಸುವ ಭಗೀರಥ ಕಾರ್ಯಕ್ಕೆ ಮುಂದಾಗಿದೆ. ತೊರೆಗಜನಿ, ಹೊಸ್ಕಟ್ಟ, ದೇವರಬಾವಿ, ಹಿತ್ತಲಮಕ್ಕಿ, ಮಳಲಿ, ಗೊನೆಹಳ್ಳಿ, ಮೂಲೆಕೇರಿ, ಮಾದನಗೇರಿ ಮುಂತಾದ ಗ್ರಾಪಂ ವ್ಯಾಪ್ತಿಯಲ್ಲಿರುವ 729 ಮನೆಗಳಿಗೆ ಇನ್ನು ಮುಂದೆ ನೀರಿನ ಬವಣೆ ತಪ್ಪಲಿದೆ. ಇದರಿಂದ ತೊರ್ಕೆ ಗ್ರಾಪಂ ಜಿಲ್ಲೆಯಲ್ಲಿ ಎಲ್ಲ ಮನೆಗಳಿಗೆ ನೀರನ್ನು ನೀಡಿದ ಮೊದಲ ಗ್ರಾಮ ಪಂಚಾಯಿತಿ ಎಂಬ ದಾಖಲೆ ಬರೆಯಲಿದೆ.
ಮಳೆ ಇದ್ದಾಗ ಮಾತ್ರ ನೀರು:
ತೊರ್ಕೆ ಪಂಚಾಯಿತಿ ಭಾಗಗಳಲ್ಲಿ ಉಪ್ಪು ಉತ್ಪಾದಿಸುತ್ತಾರೆ. ಕೃಷಿಯಿದೆ. ಉತ್ತಮ ಮೀನು ಸಿಗುತ್ತದೆ. ಗರಿಷ್ಠ ಪ್ರಮಾಣದ ಸಾಕ್ಷರತೆಯಿದೆ. ಆದರೆ, ಕುಡಿಯಲು ಉತ್ತಮ ನೀರಿಲ್ಲ.
ತೊರ್ಕೆ ಗ್ರಾಪಂನ ಹೆಚ್ಚಿನ ಪ್ರದೇಶ ಉಪ್ಪು ನೀರಿನಿಂದ ಸುತ್ತುವರಿದ ಅಘನಾಶಿನಿ ಹಿನ್ನೀರಿಗೆ ಹೊಂದಿಕೊಂಡಿದೆ. ಕ್ಷಾರವಾದ ಈ ಹಿನ್ನೀರು ಕೃಷಿ ಮಾಡುವ ಗದ್ದೆಗಳಿಗೆ ಮತ್ತು ಮನೆಗಳ ಕುಡಿಯುವ ನೀರಿನ ಬಾವಿಗಳಿಗೆ ನುಗ್ಗದಂತೆ ತಡೆಯಲು 60 ದಶಕದಲ್ಲಿ ಗಜನಿ ಭೂಮಿ ತಡೆಗೋಡೆ ನಿರ್ವಿುಸಿ, ನೀರಿನ ಸರಾಗ ಸಂಚಾರಕ್ಕೆ ಅಲ್ಲಲ್ಲಿ ಜಂತ್ರಡಿ ನಿರ್ವಿುಸಲಾಗಿತ್ತು. ಕಳೆದ ಆರು ದಶಕಗಳಲ್ಲಿ ಕೆಲವು ಕಡೆ ತಡೆಗೋಡೆ ಒಡೆದು ಜಲ ಸಮಾಧಿಯಾಯಿತು. ಇನ್ನು ಕೆಲವು ಜಂತ್ರಡಿಗಳು ಜಂಗು ತಿಂದು ಮೂಲೆ ಸೇರಿತು. ಇದರಿಂದ ಉಪ್ಪಾದ ಹಿನ್ನೀರು ಕುಡಿಯುವ ನೀರಿನ ಬಾವಿಗಳನ್ನು ಆಕ್ರಮಿಸಲು ಸುಲಭವಾಯಿತು.
ಮಸಾಕಲ್, ತೊರೆಗಜನಿ, ಹೊಸ್ಕಟ್ಟ ಮುಂತಾದ ಹಿನ್ನೀರಿಗೆ ಅತಿ ಹತ್ತಿರವಿರುವ ಮೀನುಗಾರರು ದೋಣಿ ಮೇಲೆ ನೀರು ತರುವುದು ಸಾಮಾನ್ಯವಾಗಿತ್ತು. ಇದರಿಂದ ಮಳೆಗಾಲದಲ್ಲಿ ಮಾತ್ರ ಸಿಹಿ ನೀರು. ಆನಂತರದ ಏಳೆಂಟು ತಿಂಗಳು ಬೇರೆ ಕಡೆಯಿಂದ ನೀರು ತಂದು ಜೀವನ ಸಾಗಿಸುವ ದುಸ್ಥಿತಿ. ಮರಾಕಲ್ ಗ್ರಾಮದಲ್ಲಿನ ಗಂಗಾವಳಿ ನದಿಯಿಂದ ಸರಬರಾಜಾಗುವ ಗೋಕರ್ಣ ಬೃಹತ್ ಕುಡಿಯುವ ನೀರಿನ ಯೋಜನೆ ಕಳೆದ ಎರಡು ವರ್ಷ ಹಿಂದೆ ಪ್ರಾರಂಭವಾಯಿತು. ಇದರಿಂದ ತೊರ್ಕೆ ಗ್ರಾಪಂನ ಅನೇಕ ಕಡೆಗಳಲ್ಲಿ ಸಾರ್ವಜನಿಕವಾಗಿ ನೀರು ಪಡೆಯಲು ಅನುಕೂಲ ಮಾಡಲಾಯಿತು.
ಈಗ ಪ್ರತಿ ಮನೆಗೆ ನೀರು: ಗ್ರಾಮಸ್ಥರು ಬಹು ಕಾಲದಿಂದ ಅನುಭವಿಸುತ್ತಿರುವ ಈ ಕಷ್ಟವನ್ನು ತಪ್ಪಿಸಲು ತೊರ್ಕೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲ ಸದಸ್ಯರು ಮನೆ ಮನೆಗೆ ಕೊಳವೆ ನೀರು ಕೊಡುವ ಸಾಹಸಕ್ಕೆ ಮುಂದಾದರು. ಇದಕ್ಕೆ ಜಿಲ್ಲಾ ಪಂಚಾಯಿತಿ 2 ಕೋಟಿ 27 ಲಕ್ಷ ರೂಪಾಯಿ ಅನುದಾನ ಒದಗಿಸಿತು. ಇದರಿಂದ ಗ್ರಾಪಂನ ಎಲ್ಲ ಕಡೆ ಕೊಳವೆ ಹಾಕಿ ಪ್ರತಿ ಮನೆಗೆ ಪೈಪ್ ಜೋಡಣೆ ಮಾಡಿ, ಮೀಟರ್ ಅಳವಡಿಸಲಾಗಿದೆ. ವಾರ್ಡ್​ನ ಆರ್ಥಿಕ ಸ್ಥಿತಿ ಅವಲಂಬಿಸಿ ನೀರು ಪಡೆಯಲು ಗ್ರಾಪಂಗೆ ಸಲ್ಲಿಸಬೇಕಾದ ವಂತಿಗೆ ನಿಗದಿಸಲಾಗಿದೆ. ಇದರ ಪ್ರಕಾರ ಒಟ್ಟು 3 ಲಕ್ಷ 83 ಸಾವಿರದ 99 ರೂಪಾಯಿ ವಂತಿಕೆ ಮನೆಗಳಿಂದ ಸಂದಾಯವಾಗಿದೆ. ಜನರಿಂದ ಯೋಜನೆಗೆ ಉತ್ತಮ ಸಹಕಾರ ದೊರಕಿದೆ.
ಆರ್ಥಿಕ ಭಾರದ ಹೊರೆ
ಈ ಯೋಜನೆಯಿಂದ ಗ್ರಾಮಸ್ಥರಿಗೆ ದೊಡ್ಡ ಉಪಕಾರವಾಯಿತು. ಜಿಲ್ಲೆಯಲ್ಲಿ ಹೊಸ ದಾಖಲೆಗೂ ಕಾರಣವಾಯಿತು. ಆದರೆ, ಯೋಜನೆಯ ಆರ್ಥಿಕ ಹೊರೆಯ ಭಾರದಿಂದ ಗ್ರಾಪಂ ತತ್ತರಿಸಬೇಕಾಗಿದೆ. ಯೋಜನೆಯ ನಿಯಮದ ಪ್ರಕಾರ ಗ್ರಾಪಂ ಯೋಜನೆಯ ವಂತಿಕೆಯಾಗಿ ಒಟ್ಟು 52 ಲಕ್ಷ 72 ಸಾವಿರದ 558 ರೂಪಾಯಿಯನ್ನು ಸರ್ಕಾರಕ್ಕೆ ಕಟ್ಟಬೇಕಾಗಿದೆ. ಈ ಪೈಕಿ 21 ಲಕ್ಷ 9 ಸಾವಿರದ 23 ರೂಪಾಯಿ ಗ್ರಾಮಸ್ಥರು ಮನೆ ಮನೆಯಿಂದ ನೀಡುವ ವಂತಿಕೆ ರೂಪದಲ್ಲಿ ಮತ್ತು ಉಳಿದ ಹಣ ಗ್ರಾಪಂ ಭರಿಸಬೇಕು. ಹೀಗೆ ಗ್ರಾಪಂ ನೀಡಬೇಕಾದ 31 ಲಕ್ಷ ರೂಪಾಯಿಗೂ ಹೆಚ್ಚಿನ ವಂತಿಗೆಯನ್ನು ಪ್ರತಿ ವರ್ಷ ಸರ್ಕಾರದಿಂದ ಬರುವ ಅನುದಾನದಲ್ಲಿ 5 ಲಕ್ಷ ರೂಪಾಯಿ ಮುರಿದುಕೊಳ್ಳಲಾಗುವುದು. ಗ್ರಾಪಂಗೆ ವಾರ್ಷಿಕವಾಗಿ ನಿಗದಿಯಾಗಿರುವುದು 21 ಲಕ್ಷ ರೂ. ಅನುದಾನ. ಇದರಲ್ಲಿ 5 ಲಕ್ಷ ರೂಪಾಯಿ ಮುರಿದರೆ ಅಭಿವೃದ್ಧಿಯ ಗತಿಯೇನು? ಸಾರ್ವಜನಿಕ ಅಗತ್ಯ ಕಾಮಗಾರಿಗಳಿಗೆ ಏನು ಮಾಡುವುದು ಎಂಬ ಚಿಂತೆ ಈಗ ಕಾಡುತ್ತಿದೆ.

ಉತ್ತರ ಕನ್ನಡದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯೊಂದು ಮನೆ ಮನೆಗೆ ನೀರು ತಲುಪಿಸುವ ದಾಖಲೆಗೆ ಕಾರಣವಾಗುತ್ತಿರುವುದು ಶ್ಲಾಘನೀಯವಾಗಿದೆ. ಈ ಬಗ್ಗೆ ತ್ವರಿತ ಗತಿಯಲ್ಲಿ ಪ್ರಯತ್ನಿಸಿ ಯಶಸ್ವಿಯಾದ ತೊರ್ಕೆ ಗ್ರಾಪಂ ಅಧ್ಯಕ್ಷರು ಮತ್ತು ಸಂಬಂಧಿಸಿದ ಎಲ್ಲರೂ ಅಭಿನಂದನಾರ್ಹರು. ಗ್ರಾಪಂ ಸರ್ಕಾರಕ್ಕೆ ಸಲ್ಲಿಸ ಬೇಕಾದ ದೊಡ್ಡ ಮೊತ್ತದ ವಂತಿಕೆಯ ಭಾರ ಕಡಿಮೆ ಮಾಡುವ ಬಗ್ಗೆ ಎಲ್ಲ ಸಹಕಾರ ನೀಡಲಾಗುವುದು.| ದಿನಕರ ಶೆಟ್ಟಿಶಾಸಕರು ಕುಮಟಾಯೋಜನೆಗೆ ಸಂಬಂಧಿಸಿದ ಗ್ರಾಮಸ್ಥರ ಮತ್ತು ಗ್ರಾಪಂನ ಎಲ್ಲ ಸದಸ್ಯರ ಸಹಾಯ ದೊರೆತಿರುವುದರಿಂದ ಮನೆ ಮನೆಗೆ ನೀರುಣಿಸಲು ಸಾಧ್ಯವಾಗಿದೆ. ಯೋಜನೆಗೆ ಗ್ರಾಪಂ ಸಲ್ಲಿಸಬೇಕಾದ ವಂತಿಗೆಯ ಭಾರ ಕಡಿಮೆ ಮಾಡಲು ದಾನಿಗಳ ಮತ್ತು ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರ ನೆರವು ಕೇಳಲಾಗುವುದು.| ಆನಂದ ಕವರಿ, ಅಧ್ಯಕ್ಷರು ತೊರ್ಕೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net