

ಹಲಗೂರು: ತೊರೆ ಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುತ್ತಿರುವ 2100 ಎಂಎಂ ಸುತ್ತಳತೆಯ 250 ಎಂಎಲ್ ಸಾಮರ್ಥ್ಯವುಳ್ಳ ನೀರಿನ ಪೈಪ್ ವಾಲ್ವ್ ನಟ್ ಕಳಚಿದ ಪರಿಣಾಮ ಗುಂಡಾಪುರದ ಶಿವಲಿಂಗೇಗೌಡ ಎಂಬುವರ ಜಮೀನಿನ ಬಳಿ ನೀರು ಸುಮಾರು 40 ರಿಂದ 50 ಅಡಿ ಎತ್ತರಕ್ಕೆ ಚಿಮ್ಮಿ ಸಾಕಷ್ಟು ಪೋಲಾಯಿತು.
ಈ ಸಂದರ್ಭದಲ್ಲಿ ನೀರು ಹರಿದು ಹೋಗುತ್ತಿರುವುದನ್ನು ಹಾಗೂ ಚಿಮ್ಮುತ್ತಿರುವ ದೃಶ್ಯವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದರು.
ವಿಷಯ ತಿಳಿದ ತಕ್ಷಣ ಬಿಡಬ್ಲುೃಎಸ್‌ಎಸ್‌ಬಿ ಎಇಇ ರಘು, ಎಇ ವಿನೋದ್ ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀರು ಸ್ಥಗಿತಗೊಳಿಸಿ, ಡ್ಯಾಮೇಜ್ ಆಗಿದ್ದ ಬಾಲ್ ವಾಲ್ವ್ ನಟ್ ಸರಿ ಮಾಡಿದರು. ಬಳಿಕ ಮತ್ತೆ ನೀರು ಸರಬರಾಜು ಮಾಡಿರುವುದಾಗಿ ಇಇ ಬಿ.ಕೆ .ನರೇಶ್ ತಿಳಿಸಿದ್ದಾರೆ.