ಜಿಲ್ಲೆಯಲ್ಲಿ ಕಟ್ಟೆಯೊಡೆದ ಆಕ್ರೋಶ: ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಪ್ರತಿಭಟನೆ

1 (3)
Published on

ಮಂಡ್ಯ: ಮುಂಗಾರು ಕೈಕೊಟ್ಟು ಸಂಕಷ್ಟದಲ್ಲಿರುವ ಸ್ಥಿತಿಯಲ್ಲಿರುವ ನಡುವೆಯೂ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮಾತ್ರವಲ್ಲದೆ ಸರಣಿ ಪ್ರತಿಭಟನೆ ನಡೆದವು.

ತ.ನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಯ ರೈತರ ಬದುಕು ಹಸನಾಗಲು ಕೃಷ್ಣರಾಜಸಾಗರ ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಾರ್ಷಿಕ ಮಳೆಯ ಕೊರತೆಯಿಂದ ಅಣೆಕಟ್ಟು ಭರ್ತಿಯಾಗಬೇಕಿತ್ತು. ಆದರೆ, 110 ಅಡಿ ಕಂಡಿರುವ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ನೀರು ಬಿಡುವ ವಿಚಾರದಲ್ಲಿ ಸರ್ಕಾರ ಭಾರತದ ಉಚ್ಚ ನ್ಯಾಯಾಲಯಕ್ಕೆ ಪರಿಸ್ಥಿತಿಯನ್ನು ಮನದಟ್ಟು ಮಾಡಿಸಿ ಜಿಲ್ಲೆಯ ರೈತರ ಹಿತಕಾಪಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ವಾರದಿಂದ ಎರಡು ರಾಷ್ಟ್ರೀಯ ಪಕ್ಷಗಳು ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ತೊಂದರೆಕೊಟ್ಟು ಅವಾಚ್ಯ ಬ್ಧಗಳಿಂದ ನಿಂದನೆ ಮಾಡಿ ಸ್ವ-ಹಿತಾಸಕ್ತಿಗಾಗಿ ಚಳವಳಿ ನಡೆಸಿರುವುದನ್ನು ಖಂಡನೀಯ. ರಾಜಕಾರಣಿಗಳಿಗೆ ರೈತರ ಹಿತಚಿಂತನೆ ಮುಖ್ಯವಾಗದೆ ವೈಯಕ್ತಿಕ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.

ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ರೈತರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕನಿಷ್ಟ ಕಾಳಜಿ ಇಲ್ಲ. ತೋರಿಕೆಗೆ ನಾಲೆಗಳಲ್ಲಿ ಎರಡು ಸಾವಿರ ಕ್ಯೂಸೆಕ್ ನೀರು ಹರಿಸಿ, ತಮಿಳುನಾಡಿಗೆ 13 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸುತ್ತಿದ್ದಾರೆ. ಸರ್ಕಾರ ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ. ರೈತರು ನ್ಯಾಯಾಲಯಕ್ಕೆ ಹೋಗಿ ಎಂದು ಉಪ ಮುಖ್ಯಮಂತ್ರಿ ಹೇಳುತ್ತಾರೆ, ಭ್ರಷ್ಟಾಚಾರ ಮಾಡಿ ನ್ಯಾಯಾಲಯಕ್ಕೆ ಅಲೆದಲೆದು ಅವರಿಗೆ ಅಭ್ಯಾಸವಾಗಿದೆ. ಅದಕ್ಕೆ ರೈತರಿಗೂ ನ್ಯಾಯಾಲಯಕ್ಕೆ ಹೋಗಿ ಎನ್ನುತ್ತಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಬೆಳೆ ಹಾಕಬೇಡಿ ಎನ್ನುತ್ತಾರೆ. ಹೀಗಾದರೆ ರೈತರ ಸಾಲವನ್ನು ಯಾರು ತೀರಿಸುತ್ತಾರೆ. ರೈತರ ಮನೆಯ ಚಿನ್ನಾಭರಣಗಳ ಸಾಲವನ್ನು ಸರ್ಕಾರ ತೀರಿಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಪ್ರಸಕ್ತ ಮುಂಗಾರು ಬೆಳೆಗ ನೀರು ಕೊಡದಿದ್ದರೆ ರೈತರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ತಕ್ಷಣ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಜಿಲ್ಲೆಗೆ ಯಾವ ಪ್ರತಿನಿಧಿಯೂ ಕಾಲಿಡುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಮದ್ದೂರು, ಮಳವಳ್ಳಿ ಭಾಗಕ್ಕೆ ಸಮರ್ಪಕ ನೀರು ಹರಿಯುತ್ತಿಲ್ಲ. ತಕ್ಷಣ ನಾಲೆಗಳಲ್ಲಿ ನೀರು ಹರಿಸಬೇಕು. ಬೆಳೆ ಬೆಳೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಬೇಕಾಗುತ್ತದೆ. ಕೃಷ್ಣರಾಜಸಾಗರ ಅಣೆಕಟ್ಟೆಗೆ 3 ಕೋಟಿ ರೂ ನಿರ್ವಹಣಾ ವೆಚ್ಚ ಖರ್ಚು ಮಾಡುತ್ತಿದ್ದಾರೆ. ತಮಿಳುನಾಡು ಒಂದು ರೂ ನಿರ್ವಹಣಾ ವೆಚ್ಚ ನೀಡುತ್ತಿಲ್ಲ. ಜಲಾಶಯದ ನಿರ್ವಹಣೆ ಮಾತ್ರ ನಮ್ಮದು. ನೀರು ಮಾತ್ರ ಅವರಿಗೆ ಬಿಡಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಎರಡೂ ಪಕ್ಷಗಳ ರಾಜಕೀಯದಾಟ ನಡೆದಿತ್ತು. ಪರಸ್ಪರ ನಿಂದಿಸಿಕೊಳ್ಳುತ್ತಿದ್ದರು. ಇಂತಹ ಕ್ರಮಕ್ಕೆ ಜಿಲ್ಲಾಡಳಿತ ಏಕೆ ಅನುಮತಿ ನೀಡಿತ್ತು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏನು ಮಾಡುತ್ತಿದ್ದರು. ಅವರಿಗೆ ಏಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಸ್ವಾರ್ಥಿಗಳಾಗಿರುವ ರಾಜಕಾರಣಿಗಳಿಗೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಹಕ್ಕಿಲ್ಲ. ಅದೇನಿದ್ದರೂ ರೈತರಿಗೆ ಮಾತ್ರ ಎಂದು ಧರಣಿ ಸತ್ಯಾಗ್ರಹದ ಬಗ್ಗೆ ಟೀಕಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಂಕರ್, ಇಂಡುವಾಳು ಬಸವರಾಜು, ಮಂಜೇಶ್‌ಗೌಡ, ರಾಮೇಗೌಡ, ಬೋರಲಿಂಗೇಗೌಡ, ಉಮೇಶ, ಶಿವರುದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net