ಕಟ್ಟೆಪುರದಿಂದ ಕೆರೆ-ಕಟ್ಟೆಗಳಿಗೆ ನೀರು

ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಶಾಸಕ ಎ. ಮಂಜು ದಲಿತರ ಮನೆಯಲ್ಲಿ ಊಟ ಮಾಡಿದರು.
ಅರಕಲಗೂಡು ತಾಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಶಾಸಕ ಎ. ಮಂಜು ದಲಿತರ ಮನೆಯಲ್ಲಿ ಊಟ ಮಾಡಿದರು.
Published on

ಅರಕಲಗೂಡು: ದೊಡ್ಡಬೆಮ್ಮತ್ತಿ ಮತ್ತು ಸುತ್ತಮುತ್ತಲಿನ ಕೆರೆ-ಕಟ್ಟೆಗಳಿಗೆ ಕಟ್ಟೆಪುರ ಎರಡನೇ ಹಂತದ ನೀರಾವರಿ ಯೋಜನೆಯಡಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ದಲಿತ ಕಾಲನಿಯಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ತಾಲೂಕಿನ ಮಲ್ಲಿಪಟ್ಟಣ ಹೋಬಳಿ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾವು ಸಚಿವರಾಗಿದ್ದ ವೇಳೆ ಕೊಣನೂರು ಮತ್ತು ಕಣಿಯಾರು ಏತನೀರಾವರಿ ಯೋಜನೆಗಳಿಗೆ ಮುಂಗಡ ಪತ್ರದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಕೈಬಿಡಲಾಗಿತ್ತು. ಎರಡೂ ಯೋಜನೆಗಳ ವ್ಯಾಪ್ತಿಯ ಕೆರೆ-ಕಟ್ಟೆಗಳನ್ನು ಕಟ್ಟೆಪುರ ಎರಡನೇ ಹಂತದ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಸರ್ಕಾರ 77 ಕೋಟಿ ರೂ. ಅನುದಾನ ನೀಡಿದ್ದು, 2026ರಲ್ಲಿ ಈ ಭಾಗದ ಕೆರೆಕಟ್ಟೆಗಳಿಗೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಲ್ಲಾಪಟ್ಟಣ ಗ್ರಾಮದ ಬಳಿ 180 ಕೋಟಿ ರೂ. ವೆಚ್ಚದಲ್ಲಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ತೆರೆಯಲಾಗುತ್ತಿದೆ. ಅಲ್ಲದೆ ಕೇರಳಾಪುರ, ಗುಡ್ಡನಕೊಪ್ಪಲು, ಸಿದ್ದಾಪುರ ಗೇಟ್, ಸಂತೆಮರೂರಲ್ಲಿ 66 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದು, ಇವು ಕಾರ್ಯಾರಂಭಗೊಂಡರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದರು.

ಸ್ಮಶಾನ, ಸರ್ಕಾರಿ ಶಾಲೆಯಲ್ಲಿ ಶೌಚಗೃಹ ವ್ಯವಸ್ಥೆ ಸೇರಿದಂತೆ ಗ್ರಾಮಸ್ಥರ ಹಲವು ಸಮಸ್ಯೆಗಳ ಕುರಿತು ಪರಿಶೀಲಿಸಿ ತುರ್ತಾಗಿ ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿವರ್ಷ ಅಂಬೇಡ್ಕರ್ ಜಯಂತಿ ಹಿಂದಿನ ದಿನ ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ನಡೆಸುವುದನ್ನು ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದು ಈ ಬಾರಿ ಗ್ರಾಮದ ಸೋಮಣ್ಣ ಅವರ ಮನೆಯಲ್ಲಿ ವಾಸ್ತವ್ಯ ಕೈಗೊಂಡಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net