ಮುಂಡಗೋಡ ತಾಲೂಕಿನಾದ್ಯಂತ ಪಾತಾಳಕ್ಕಿಳಿದ ಕೊಳವೆಬಾವಿಗಳ ಜಲ

MND BOREBELL
Published on

ಮುಂಡಗೋಡ: ತಾಲೂಕಿನ ಹಲವು ಭಾಗಗಳಲ್ಲಿ ಅಂತರ್ಜಲ ಕುಸಿತ ಕಂಡಿರುವ ಪರಿಣಾಮ ಹಿಂಗಾರು ಹಾಗೂ ನೀರಾವರಿ ಗೋವಿನಜೋಳ ಬೆಳೆದಿರುವ ರೈತರು ಆತಂಕಕ್ಕೀಡಾಗಿದ್ದಾರೆ.

2024ರಲ್ಲಿ ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆ ಸುರಿದಿತ್ತು. ಇದರಿಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಬೋರವೆಲ್​ವುಳ್ಳ ರೈತರು ಹಿಂಗಾರು ಹಾಗೂ ನೀರಾವರಿ ಬೆಳೆಯಾಗಿ ಗೋವಿನಜೋಳ ಬೆಳೆದಿದ್ದಾರೆ. ಆದರೆ, ಗೋವಿನಜೋಳವು ತೆನೆ ಹಾಕಿದ್ದು ಕಾಳು ಕಟ್ಟಿದೆ. ಮಾರ್ಚ್​ನಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಅಂಥದ್ದರಲ್ಲಿ ಬೆಳೆಗೆ ಸಮರ್ಪಕವಾಗಿ ನೀರು ಪೂರೈಸಲು ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್​ವೆಲ್​ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಪರದಾಡುವಂತಾಗಿದೆ.

ತಾಲೂಕಿನ ಚವಡಳ್ಳಿ, ನಾಗನೂರ, ಇಂದೂರ, ಹುನಗುಂದ, ನಂದಿಗಟ್ಟ, ಚಿಗಳ್ಳಿ, ಕಾತೂರ ಪಂಚಾಯಿತಿ ವ್ಯಾಪ್ತಿಯ ಕೆಲ ಭಾಗಗಳಲ್ಲಿ ದಿಢೀರನೆ ಅಂತರ್ಜಲ ಕುಸಿತವಾಗಿದೆ. ಬೋರ್​ವೆಲ್​ಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಮೊದಲೆಲ್ಲ ಬೆಳಗ್ಗೆಯಿಂದ ಸಂಜೆಯವರೆಗೂ ನೀರು ಹಾಯಿಸುತ್ತಿದ್ದ ರೈತರು ಅಂತರ್ಜಲ ಬತ್ತಿದ್ದರಿಂದ ಮೂರ್ನಾಲ್ಕು ತಾಸುಗಳಲ್ಲಿ ಬೋರ್​ವೆಲ್​ಗಳಿಂದ ನೀರು ಬರುತ್ತಿಲ್ಲ. ಬಂದರೂ ಸಮರ್ಪಕವಾಗಿ ಬರುತ್ತಿಲ್ಲ. ಒಂದೆರಡು ತಾಸು ಬೋರ್​ವೆಲ್ ಬಂದ್ ಮಾಡಿ ಮತ್ತೆ ಮೋಟಾರ್ ಚಾಲೂ ಮಾಡಿದಾಗ ನೀರು ಬರುತ್ತದೆ. ಮತ್ತೆರಡು ತಾಸಿಗೆ ನೀರು ಸಣ್ಣವಾಗುತ್ತದೆ. ಇದರಿಂದಾಗಿ ಸಮರ್ಪಕ ನೀರು ಬೋರ್​ವೆಲ್​ನಿಂದ ಹೊರಬಾರದೇ ಬೆಳೆಗೆ ನೀರು ಹಾಯಿಸುವುದು ಕಷ್ಟ ಸಾಧ್ಯವಾಗಿದೆ.

ತಾಲೂಕಿನ ಚವಡಳ್ಳಿ, ಚಿಗಳ್ಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಕುಸಿತವಾಗಿದ್ದು ಒಂದೆರಡು ತಾಸು ಮಾತ್ರ ಬೋರ್​ಗಳಲ್ಲಿ ನೀರು ಬರುತ್ತಿದೆ. ಇದರಿಂದಾಗಿ ಗೋವಿನಜೋಳ ಬೆಳೆಗಾರರು ಹಗಲು-ರಾತ್ರಿ ಎನ್ನದೆ ಬೋರವೆಲ್​ಗಳಿಂದ ಬರುವ ಅಲ್ಪ ಸ್ವಲ್ಪ ನೀರನ್ನು ಬೆಳೆಗೆ ಹಾಯಿಸಿ ಶತಾಯ ಗತಾಯ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೂ ಅಂತರ್ಜಲ ಕುಸಿತವಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇಲ್ಲದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net