ವೈಜ್ಞಾನಿಕ ಸಂಸ್ಥೆಗಳ ಬಳಿ ಚಿರತೆಗಳ ಓಡಾಟ

24 NYK
Published on

ನಾಯಕನಹಟ್ಟಿ: ಸಮೀಪದ ವೈಜ್ಞಾನಿಕ ಸಂಸ್ಥೆಗಳ ಪ್ರದೇಶ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳಿಂದ ಸಿಬ್ಬಂದಿ, ಈ ಭಾಗದ ರೈತರಲ್ಲಿ ಆತಂಕ ಉಂಟಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆವರಣದಲ್ಲಿ ಚಿರತೆ ಠಿಕಾಣಿ ಹೂಡಿದೆ. 20 ದಿನಗಳ ಹಿಂದೆ ಹೊಸಗುಡ್ಡ ಪ್ರದೇಶದ ಸರ್ವೇ ನಂ. 138 ರ ಹೊಲದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದ ಸಾಕಮ್ಮ- ಗಾದ್ರಿಪಾಲಯ್ಯ ಅವರ ಮೂರು ಕುರಿಗಳು, ಬಂಡೆಹಟ್ಟಿ ಗ್ರಾಮದಲ್ಲಿ ಒಂದು ಹಸು ಮತ್ತು ಒಂದು ಮೇಕೆಯನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆ ಪ್ರತಿ ಮೇಕೆ ಅಥವಾ ಕುರಿಗೆ 5 ಸಾವಿರ ರೂ.ನಂತೆ ಪರಿಹಾರ ವಿತರಿಸಿದೆ.

15 ದಿನಗಳ ಹಿಂದೆ ಬೊಮ್ಮದೇವರಹಟ್ಟಿಯ ರೈತ ಗುರುಸ್ವಾಮಿ ರಾತ್ರಿ ಹೊಲದಲ್ಲಿ ನೀರು ಹಾಯಿಸುವಾಗ ಕತ್ತಲೆ

ಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಕಾಡು ಹಂದಿಗಳಿರಬಹುದೆಂದು ಬ್ಯಾಟರಿ ಬೆಳಕಿನಲ್ಲಿ ನೋಡಿದಾಗ ಚಿರತೆಗಳು ಎನ್ನುವುದು ಗೊತ್ತಾಗಿ ರೈತ ಓಡಿ ಹೋಗಿ ಮನೆ ಸೇರಿಕೊಂಡಿದ್ದಾನೆ.

ಸುತ್ತಲಿನ ಗ್ರಾಮಗಳಾದ ಬೊಮ್ಮದೇವರಹಟ್ಟಿ, ಗಡ್ಡದಾರಹಟ್ಟಿ, ಬಂಗಾರದೇವರಹಟ್ಟಿ, ಹೊಸಗುಡ್ಡ ಸೇರಿ ಡಿಆರ್‌ಡಿಒ, ಐಐಎಸ್ಸಿ ಸುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಸಂಚರಿಸುತ್ತಿವೆ. ಡಿಆರ್‌ಡಿಒ ಕಾವಲು ಪಡೆ ಮತ್ತು ಐಐಎಸ್ಸಿ ಸಿಬ್ಬಂದಿ ಚಿರತೆಗಳ ಚಲನವಲನಗಳನ್ನು ನೋಡಿದ್ದಾರೆ. ಐಐಎಸ್ಸಿ ಕ್ಯಾಂಪಸ್‌ನಲ್ಲಿದ್ದ ನಾಯಿಗಳನ್ನೆಲ್ಲ ಚಿರತೆ ತಿಂದು ಹಾಕಿದೆ.

ಈ ಭಾಗ ಅರಣ್ಯ ಪ್ರದೇಶವಾದ್ದರಿಂದ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಚಿರತೆ ಈ ಭಾಗದಲ್ಲಿ ನೆಲೆಸಿವೆ.

ಬೊಮ್ಮದೇವರಹಟ್ಟಿ ಬಳಿಯ ಎತ್ತಿನಗೂಡು ಸಮೀಪದ ಸೋಮಲು ಕೆರೆ ತುಂಬಿರುವುದರಿಂದ ರೈತರು ದನ, ಕುರಿಗಳನ್ನು ಹೊಡೆದುಕೊಂಡು ನೀರು ಕುಡಿಸಲು ಹೋಗುವುದು ಸಾಮಾನ್ಯ. ಇಲ್ಲಿಗೆ ಬರುವ ದನ, ಕುರಿಗಳಿಗೆ ಹೊಂಚು ಹಾಕುತ್ತ ಕಾಯುತ್ತಿರುವ ಚಿರತೆಗಳನ್ನು ಅನೇಕರು ಗಮನಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಡಿಆರ್‌ಡಿಒ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿ ಬೋನು ಇರಿಸಿದ್ದರು. ಆದರೆ ಚಿರತೆ ಸೆರೆಯಾಗಿಲ್ಲ. ಅರಣ್ಯ ಇಲಾಖೆ ಬೋನು ನಿರ್ಮಿಸಿಕೊಳ್ಳಲು ಡಿಆರ್‌ಡಿಒ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಚಿರತೆಗಳನ್ನು ನೋಡಿರುವ ಗ್ರಾಮಸ್ಥರು ರಾತ್ರಿ ವೇಳೆ ಹೊಲಕ್ಕೆ ಹೋಗಲು ಹೆದರುತ್ತಿದ್ದಾರೆ. ಐಐಎಸ್ಸಿ ಮತ್ತು ಡಿಆರ್‌ಡಿಒ ಸಿಬ್ಬಂದಿ ರಾತ್ರಿ ವೇಳೆ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net