

ಕುಣಿಗಲ್: ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಮಾಕೋರ್ನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗೆ ನೀರು ಹರಿಸಲು ಶಾಸಕ ಡಾ.ಎಚ್.ಡಿ.ರಂಗನಾಥ್ ಶುಕ್ರವಾರ ಗೇಟ್ ವಾಲ್ ತಿರುಗಿಸಿದರು.
ಎಂಟು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭತ್ತದ ಬೆಳೆಗೆ ನೀರು ಕೊಡಲಾಗಿರಲಿಲ್ಲ, ಮೂರು ವರ್ಷ ಸತತವಾಗಿ ರಾಗಿ ಬೆಳೆಗೆ ನೀರು ಹರಿಸಿದ್ದು, ಈ ಬಾರಿ ಭತ್ತದ ಬೆಳೆಗೆ ನೀರು ಹರಿಸಿದ ಸೌಭಾಗ್ಯ ನನ್ನದಾಗಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿದರು.
ಜಲಾಶಯದ ಪೂರ್ಣ ನೀರಿನ ಮಟ್ಟ 88.50 ಅಡಿ ಇದ್ದು, ಪ್ರಸಕ್ತ 88.30 ಅಡಿ ನೀರಿದೆ, ಮಳೆಯ ಪ್ರಮಾಣ ಹಾಗೂ ರೈತರ ಬೇಡಿಕೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಲಹಾ ಸಮಿತಿಯಲ್ಲಿ ನೀಡಿದ ಮಾತಿನಂತೆ ಭತ್ತದ ಬೆಳೆಗೆ ನೀರು ಹರಿಸಲಾಗುತ್ತಿದೆ ಎಂದರು.
ಸತತವಾಗಿ ನಾಲ್ಕು ವರ್ಷ ಜಲಾಶಯ ತುಂಬಿದ ಹರ್ಷಕ್ಕೆ ಶಾಸಕರು ವೃದ್ಧೆಗೆ ಸಿಹಿ ತಿನಿಸಿ ಸಂಭ್ರಮಿಸಿದರು. ಹೇಮಾವತಿ ನಾಲಾ ವಿಭಾಗದ ಎಇಇ ಜಗದೀಶ್, ಜೆಇ ಗೋವಿಂದೇಗೌಡ, ಆನಂದ್ ಇದ್ದರು.
ನೀರು ಬಿಡುವ ಅವಧಿ: ಜು.23 ರಿಂದ 29ರವರಿಗೆ ಏಳು ದಿನ, ಆ.4 ರಿಂದ 8ರವರಿಗೆ ಐದು ದಿನ, ಆ.14 ರಿಂದ 18 ರವರೆಗೆ ಐದು ದಿನ, ಆ.29 ರಿಂದ ಸೆ.17 ರವರಿಗೆ 20 ದಿನ ನಾಟಿಗೆ, ಸೆ.26 ರಿಂದ ಸೆ.30 ರವರೆಗೆ ಐದು ದಿನ, ಅ.9 ರಿಂದ 15ರವರೆಗೆ ಏಳು ದಿನಗಳು, ಅ.27 ರಿಂದ ನ.2ರವರೆಗೆ ಏಳು ದಿನ, ನ.14 ರಿಂದ 20ರವರಿಗೆ ಏಳು ದಿನು, ನ .28 ರಿಂದ ಡಿ.5ರವರೆಗೆ ಏಳು ದಿನ, ಡಿ.13 ರಿಂದ 19 ರವರೆಗೆ ಏಳು ದಿನ, ಡಿ.26 ರಿಂದ 2023ರ ಜ 1ರವರೆಗೆ 7 ದಿನಗಳು ನೀರು ಹರಿಸಲಾಗುವುದು ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಕಾಲುವೆಯಲ್ಲಿ ನೀರು ಪೋಲು ಮಾಡದೆ ಉಪಯೋಗಿಸಿಕೊಳ್ಳಬೇಕು. ಕಾಲುವೆ ತೂಬು, ಸಿ.ಡಿ.ಗಳನ್ನು ಹಾಳು ಮಾಡದೆ ಕಾಪಾಡಬೇಕು, ಕಾಲುವೆ ಏರಿ ಅನಧಿಕೃತವಾಗಿ ಒಡೆದು ನೀರು ಹಾಯಿಸಿಕೊಳ್ಳಬಾರದು, ಅಧಿಕೃತ ತೂಬುಗಳ ಮೂಲಕ ಸಂಬಂಧಪಟ್ಟ ಇಲಾಖೆ ಸೌಡಿಗಳ ಮೂಲಕವೇ ನೀರು ಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.