ಉದ್ಯಮಕ್ಕೆ ನೀರಿನ ಬರೆ!, ಮೀನುಗಾರಿಕೆ, ಮಂಜುಗಡ್ಡೆಗೆ ನೀರಿನ ಕೊರತೆ

ice
Published on

ಇಡೀ ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್​ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ನೀರನ್ನೇ ಅವಲಂಭಿಸಿರುವ ಉದ್ಯಮವಲಯಕ್ಕೆ ನೀರಿನ ಬರೆ ಎದುರಾಗಿದೆ.

ಮಂಗಳೂರಿಗೆ ಪೂರೈಕೆಯಾಗುವ ನೀರಿನಲ್ಲಿ ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್​ಗೆ 2 ಎಂಜಿಡಿ, ಎನ್​ ಎಂಪಿಟಿಎ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್​ನಿಂದ ಎಂಆರ್​ಪಿಎಲ್​ಗೆ 6 ಎಂಜಿಡಿ ಹಾಗೂ ಎಸ್​ಇಝಡ್​ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಕೊರತೆಯಾದರೆ ಅನಿವಾರ್ಯವಾಗಿ ಎಎಂಆರ್​ ನೀರನ್ನು ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳಬೇಕಾಗುತ್ತದೆ. ಈಸಂದರ್ಭ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತಗೊಳಿಸುವುದು ಅನಿವಾರ್ಯ. ತುಂಬೆ, ಎಎಂಆರ್​ ಡ್ಯಾಂಗಳಲ್ಲಿ ನೀರಿನ ಕುಸಿತವಾಗುತ್ತಿರುವುದರಿಂದ ಕೈಗಾರಿಕೆಗೆ ನೀರು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳ್ಳುವ ಭಯ ಆವರಿಸಿದೆ. ಈಮಧ್ಯೆ ನೀರನ್ನೇ ಆಶ್ರಯಿಸಿರುವ ಮಂಗಳೂರಿನ ಸಾಂಪ್ರದಾಯಿಕ ಉದ್ಯಮಗಳಾದ ಮೀನುಗಾರಿಕೆ, ಗೃಹಕೈಗಾರಿಕೆ, ಐಸ್​್ಲ್ಯಾಂಟ್​ ಉತ್ಪಾದನೆಗಳಿಗೆ ಈಗಲೇ ನೀರಿನ ಬರೆ ಎದುರಾಗಿದೆ.

*ಟ್ಯಾಂಕರ್​ ನೀರಿಗೆ ಬೇಡಿಕೆ

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್​ಗಳು ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುವ ಮಂಜುಗಡ್ಡೆ ಟಕಗಳು ನೀರಿನ ಲಭ್ಯತೆಯ ನಿರೀಕ್ಷೆಯಲ್ಲಿದ್ದು, ಸದ್ಯ ಟ್ಯಾಂಕರ್​ಗೆ ಮೊರೆ ಇಡಲಾಗುತ್ತಿದೆ. ಮೀನುಗಾರಿಕಾ ಬಂದರು ವ್ಯಾಪ್ತಿಗೆ ಪಾಲಿಕೆ ವತಿಯಿಂದ ನೀರು ಈ ಹಿಂದೆ ನಿರಂತರವಾಗಿ ಬರುತ್ತಿತ್ತು. ಪ್ರತಿ ಡೀಸೆಲ್​ ಬಂಕ್​ನಲ್ಲಿ ಬೋಟ್​ಗಳಿಗೆ ಬೇಕಾಗುವ ನೀರು ಕೂಡ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಇದೂ ಸ್ಥಗಿತವಾಗಿ, ಟ್ಯಾಂಕರ್​ ಮೂಲಕವೇ ನೀರಿಗೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಟ್ಯಾಂಕರ್​ ನೀರಿನ ಬೆಲೆಯಲ್ಲಿಯೂ ಏರಿಕೆ ಆಗುತ್ತಿರುವ ಕಾರಣದಿಂದ ಇದು ಮೀನುಗಾರರಿಗೆ ಹೊರೆಯಾಗುತ್ತಿದೆ.

*ಐಸ್​್ಲ್ಯಾಂಟ್​ಗಳಿಂದ ಸ್ಥಗಿತ ಸಾಧ್ಯತೆ

ನಗರದ ಬಹುತೇಕ ತೆರೆದ ಬಾವಿಗಳು ಬತ್ತಿರುವುದರಿಂದ ಮಂಜುಗಡ್ಡೆ ಟಕಗಳು (ಐಸ್​ ಪ್ಲಾಂಟ್​) ನೀರಿಗಾಗಿ ಹಣ ಕೊಡುವ ಪರಿಸ್ಥಿತಿಯಲ್ಲಿದೆ. ಮಂಗಳೂರಿನಲ್ಲಿ 65 ಮಂಜುಗಡ್ಡೆ ಟಕಗಳಿವೆ. ಪಾಲಿಕೆ ನೀರು ನಿರಂತರವಾಗಿ ಸಿಗದ ಕಾರಣದಿಂದ ಟ್ಯಾಂಕರ್​ ನೀರನ್ನೇ ಅವಲಂಬಿಸಿರುವ ಟಕಗಳ ಮಾಲೀಕರು ಈಗ ನಷ್ಟದ ಭೀತಿಯಿಂದ ತಾತ್ಕಾಲಿಕವಾಗಿ ಟಕ ಬಂದ್​ ಮಾಡುವ ಯೋಚನೆಯನ್ನೂ ಮಾಡಿದ್ದಾರೆ.

ಟ್ಯಾಂಕರ್​ ನೀರಿನ ದರ 1200 ರೂ.ಗೆ ಏರಿಕೆ

ಅಕ್ಟೋಬರ್​ನಲ್ಲಿ ಮೀನಿನ ಬರ ಎದುರಾಗಿತ್ತು. ಶೇ.70ರಷ್ಟು ಬೊಟ್​ಗಳು ಕಡಲಿಗಿಳಿಯದೆ ಲಂಗರು ಹಾಕಿದ್ದವು. ಆಗ ಮಂಜುಗಡ್ಡೆ ಟಕಗಳಿಗೆ ಕೆಲಸ ಇರಲಿಲ್ಲ. ಈಗ ಬೋಟ್​ಗಳು ಮೀನುಗಾರಿಕೆಗೆ ತೆರಳುತ್ತಿವೆ. ಆಳ ಸಮುದ್ರ ಮೀನುಗಾರಿಕೆಗೆ ಹೋಗುವಾಗ ಬೋಟ್​ಗಳು 10&15 ಟನ್​ನಷ್ಟು ಮಂಜುಗಡ್ಡೆ ಕೊಂಡೊಯ್ಯುತ್ತವೆ. ವಿದ್ಯುತ್​ ದರ ಏರಿಕೆ, ಕಾರ್ಮಿಕರ ಸಮಸ್ಯೆ ಎದುರಿಸಿದ್ದ ಮಂಜುಗಡ್ಡೆ ಟಕಗಳು ಈಗ ನೀರಿನ ಸಮಸ್ಯೆ ಎದುರಿಸುತ್ತಿವೆ. ಮಂಜುಗಡ್ಡೆಯ ಒಂದು ಟಕಕ್ಕೆ ದಿನಕ್ಕೆ 5ರಿಂದ 8 ಟ್ಯಾಂಕರ್​ ನೀರು ಬೇಕಾಗುತ್ತದೆ. 1 ಟ್ಯಾಂಕರ್​ ನೀರಿನ ದರ 1200 ರೂ.ಗಳಿಂದ 1300ರೂ.ವರೆಗೆ ಇದೆ. ಅಂದರೆ ದಿನಕ್ಕೆ 6 ಸಾವಿರ ರೂ.ಗಳಿಂದ 8 ಸಾವಿರ ರೂ. ನೀರಿಗಾಗಿ ಖರ್ಚು ಮಾಡಬೇಕಾಗುತ್ತಿದೆ. ಇದು ಮಂಜುಗಡ್ಡೆ ನಿರ್ವಹಿಸುವವರಿಗೆ ಹೊರೆಯಾಗುತ್ತಿದೆ .

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಕಾ ಬೋಟ್​ಗಳಿಗೆ 6 ಸಾವಿರ ಲೀ ನೀರು ಬೇಕು. ಮೊದಲು ಪಾಲಿಕೆ ನೀರು ಸಿಗುತ್ತಿದ್ದರೂ ಈಗ ಅದು ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ಟ್ಯಾಂಕರ್​ ಮೂಲಕವೇ ನೀರು ಪಡೆಯಲಾಗುತ್ತಿದೆ. ಇದು ಮೀನುಗಾರರಿಗೆ ದೊಡ್ಡ ಹೊರೆ.

> ಮೋಹನ್​ ಬೆಂಗ್ರೆ, ಮೀನುಗಾರ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net