ನೀರಿನ ಬವಣೆಗೆ ಕೊನೆಗೂ ಮುಕ್ತಿ

koraga
Published on

ಬ್ರಹ್ಮಾವರ: ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಜನಾಂಗದವರು ಹಲವು ವರ್ಷದಿಂದ ನೀರಿನ ಬವಣೆಯಿಂದ ಬಳಲುತ್ತಿದ್ದವರು ಸಂಘಟನೆ ಮತ್ತು ಹೋರಾಟದಿಂದ ನೀರನ್ನು ಪಡೆದುಕೊಂಡಿದ್ದಾರೆ.

ತೀರಾ ಹಿಂದುಳಿದ ಬ್ರಹ್ಮಾವರ ತಾಲೂಕಿನ ಮಟಪಾಡಿಯ ಬಲ್ಜಿಯಲ್ಲಿ ಸರ್ಕಾರಿ ಮನೆ ನಿವೇಶನಗಳಲ್ಲಿ ಕೊರಗ ಸಮುದಾಯದವರ 9 ಮನೆಗಳಲ್ಲಿ ವಾಸಿಸುವ ಕೊರಗರಿಗೆ ಮಟಪಾಡಿ ಗ್ರಾಮ ಪಂಚಾಯಿತಿ ಮತ್ತು ಐಟಿಡಿಪಿ ವತಿಯಿಂದ ಕೊಳವೆ ಬಾವಿ ಮತ್ತು ತೆರೆದ ಬಾವಿ ಮಾಡಿದರೂ ನೀರು ಸಿಕ್ಕಲಿಲ್ಲ.

ಕತ್ತಲಾದ ಬಳಿಕ ಇಲ್ಲಿನ ಹೆಣ್ಣು ಮಕ್ಕಳು ಹತ್ತಿರದ ಕೆರೆ ಅಥವಾ ತೋಡಿನಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಇತ್ತು. ನೀರಿನ ಸಮಸ್ಯೆಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ವಿಶೇಷ ಮುತುವರ್ಜಿ ವಹಿಸಿ 7.60 ಕೋಟಿ ರೂ.ಯೋಜನೆಯಲ್ಲಿ ಕಾಲನಿಯಿಂದ ಒಂದುವರೆ ಕಿ.ಮೀ. ದೂರದ ಚಾಂತಾರು ಮದಗದಲ್ಲಿ ತೆರೆದ ಬಾವಿ ಮಾಡಿ ಅಲ್ಲಿಂದ ಪೈಪ್ ಮೂಲಕ ತಂದು ಕಾಲನಿಯಲ್ಲಿ 5000 ಲೀಟರ್ ಟ್ಯಾಂಕ್ ನಿರ್ಮಿಸಿದ್ದು, ಪ್ರತೀ ಮನೆಗಳಿಗೆ ನಲ್ಲಿ ವ್ಯವಸ್ಥೆ ಕಲ್ಪಿಸಿ, ಸೋಮವಾರ ನೀರು ಪೂರೈಸಲಾಗಿದೆ.

ಹತ್ತಿರದಲ್ಲೇ ಇರುವ 3 ಸೆನ್ಸ್ ಜಾಗದಲ್ಲಿ ಸಮುದಾಯ ಭವನಕ್ಕೆ ಕೊರಗ ಭಾಷೆಯಲ್ಲಿ ದೇವರ ಪ್ರಾರ್ಥನೆ, ಸಂಪ್ರದಾಯದ ಮೂಲಕ ಅಡಿಗಲ್ಲು ಕೂಡ ಹಾಕಲಾಯಿತು.

ಗುತ್ತಿಗೆದಾರ ಎಸ್.ನಾರಾಯಣ ಮತ್ತು ಕೊರಗ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸರಿತಾ ನಾಯಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಬ್ರಹ್ಮಾವರ ತಾಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗ್ರಾಮದ ಸೂರ್ಯನಾರಾಯಣ ಗಾಣಿಗ, ಕೊರಗ ಸಂಘದ ಸುಧೀರ್ ಬಲ್ಜಿ ಮೊದಲಾದವರು ಉಪಸ್ಥಿತರಿದ್ದರು.

ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸಮುದಾಯಗಳು ಕೂಡ ಸ್ಪಂದಿಸಬೇಕು. ಸರ್ಕಾರಿ ಶಾಲೆಗಳು ಶಿಕ್ಷಣ ಸಂಸ್ಥೆಗಳು ಎಲ್ಲ ಸೌಲಭ್ಯ ನೀಡಿದರೂ ಕೊರಗ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದಲ್ಲಿ ಮಾತ್ರ ಅನುಕೂಲವಾಗಲಿದೆ.

- ಡಾ.ನವೀನ್ ಭಟ್, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ

ನಮ್ಮ ಸಮಾಜಕ್ಕೆ ಇಂದು ಬೆಳಕಿನ ಹಬ್ಬ ದೀಪಾವಳಿ. ಅದೆಷ್ಟೋ ವರ್ಷದಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದ ದಿನ. ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮೊಂದಿಗೆ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

- ಗಣೇಶ್ ಕೊರಗ ಬಾರಕೂರು, ಕೊರಗ ಸಂಘಟನೆ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net