

ಮಂಡ್ಯ: ಜಿಲ್ಲೆಯ 60 ಸಾವಿರ ಎಕರೆ ಪ್ರದೇಶಕ್ಕೆ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತಂತೆ ಕೇಂದ್ರ ನೀರು ನಿರ್ವಹಣಾ ಮಂಡಳಿ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಬೇಸಿಗೆ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ನೀರು ನಿರ್ವಹಣಾ ಮಂಡಳಿ ಜತೆ ಚರ್ಚಿಸಲಾಗಿದ್ದು, ನೀರು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಪ್ರಸ್ತುತ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ 40 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆ ಇದೆ. ಕೃಷಿ ಇಲಾಖೆ ಒದಗಿಸಿರುವ ಮಾಹಿತಿಯಂತೆ ಬೇಸಿಗೆ ಹಂಗಾಮಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಸಾಧ್ಯತೆಗಳಿವೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೀರು ಕೊಡಲಾಗುವುದು. ಕೆಆರ್‌ಎಸ್ ಡ್ಯಾಂನಿಂದ 35.029 ಟಿಎಂಸಿ ನೀರನ್ನು ಕೃಷಿ ಉದ್ದೇಶಕ್ಕೆ ಹಾಗೂ 10.368 ಟಿಎಂಸಿ ನೀರನ್ನು ಕುಡಿಯುವ ನೀರಿನ ಅಗತ್ಯತೆಗೆ ಬಳಸಿಕೊಳ್ಳಬಹುದಾಗಿದೆ. ಕೃಷಿ ಚಟುವಟಿಕೆಗೆ ನೀರು ಕೊಡಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿವರಿಸಿದರು.
ಜಮೀನಿನಲ್ಲಿ ಸುತ್ತಾಡಿದ ಡಿಸಿ
ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿಯಲ್ಲಿ ಪ್ರಗತಿಪರ ರೈತ ಶ್ರೀನಿವಾಸ ಅವರ ಜಮೀನಿನಲ್ಲಿ ಡಿಸಿ ಡಾ.ಎಂ.ವಿ.ವೆಂಕಟೇಶ್ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಕಾಲ ಕಳೆದರು.
ಬುಧವಾರ ಜಮೀನಿಗೆ ದಿಢೀರ್ ಭೇಟಿ ಕೊಟ್ಟ ಅವರು, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿರುವ 40ಕ್ಕೂ ಹೆಚ್ಚು ತರಕಾರಿ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ಅಲ್ಲಿದ್ದ ರೈತರೊಂದಿಗೆ ಮಾತನಾಡಿದ ಡಿಸಿ, ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಸಧೃಡವಾಗಬಹುದು. ಜತೆಗೆ ತೋಟಗಾರಿಕೆ ಬೆಳೆಯಲ್ಲಿ ಔಷಧ ಸಸ್ಯಗಳು ಇವೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವ ಬೆಳೆ ಬೆಳೆಯುವತ್ತ ಮತ್ತು ಸಮಗ್ರ ಕೃಷಿ ಪದ್ಧತಿ ಅನುಸರಿಸುವಂತೆ ಸಲಹೆ ನೀಡಿದರು.
ಈ ವೇಳೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಶ್ರೀರಂಗಪಟ್ಟಣ ತಾಲೂಕು ಹಿರಿಯ ತೋಟಗಾರಿಕೆ ನಿರ್ದೇಶಕ ಚಂದ್ರು ಇದ್ದರು. ರೈತ ಶ್ರೀನಿವಾಸ್ ಅವರು ಬೆಳೆದಿರುವ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಸಪೋಟಾ, ಶುಂಠಿ, ಪನ್ನೀರ್ ಸೊಪ್ಪು ಸೇರಿದಂತೆ ವಿವಿಧ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸಿದರು.