

ಲಕ್ಷೆ್ಮೕಶ್ವರ: ತಾಲೂಕಿನ ಬಾಲೇಹೊಸೂರಿನ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಹಿಡಿದಿದ್ದ ಗ್ರಹಣ ಸರಿದಿದ್ದು, ಶನಿವಾರ ವರದೆಯ ನೀರು ಕೆರೆಯ ಒಡಲು ಸೇರಿತು.
2017ರಲ್ಲಿ ಸಿದ್ದರಾಮಯ್ಯ 9.40 ಕೋಟಿ ರೂ. ವೆಚ್ಚದಲ್ಲಿ ವರದಾ ನದಿಯಿಂದ ಬಾಲೇಹೊಸೂರಿನ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ನನೆಗುದಿಗೆ ಬಿದ್ದಿದ್ದ ಯೋಜನೆಯ ಸಾಕಾರಕ್ಕೆ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿಗಳು, ಯೋಜನೆಗೆ ಅನುದಾನ ತಂದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರೆಡ್ಡಿ ಹನಮರೆಡ್ಡಿ ಮತ್ತು ಗ್ರಾಮಸ್ಥರು ಹೋರಾಟ ಮಾಡಿದ್ದರು. ಇದರ ಫಲವಾಗಿ ವರ್ಷದ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಗುತ್ತಿಗೆದಾರ ಮತ್ತು ಇಲಾಖೆಯ ಇಂಜನಿಯರ್ ನಡುವಿನ ಹಗ್ಗಜಗ್ಗಾಟದಿಂದ ಕೆರೆಗೆ ನೀರು ಹರಿದು ಬಂದಿರಲಿಲ್ಲ. ಅನುದಾನ ಹೊಳೆಯಲ್ಲಿ ಹೋಮ ಮಾಡಿದಂತಾಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿತ್ತು.
ಈ ಬಗ್ಗೆ ಆ.11ರಂದು ‘ವಿಜಯವಾಣಿ’ಯು ‘ವರದೆಗಾಗಿ ಕಾದಿವೆ ಮೂರು ಕೆರೆಗಳು’ ವಿಸ್ತ್ರತ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತು ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕೆಲ ತಾಂತ್ರಿಕ ತೊಂದರೆ ಸರಿಪಡಿಸಿ, ಶನಿವಾರ ವರದಾ ನದಿಯಿಂದ ಬಾಲೇಹೊಸೂರಿನ ಕೆರೆಗಳಿಗೆ ನೀರು ಸರಬರಾಜು ಮಾಡಿಸಿದ್ದಾರೆ.
‘ನಮ್ಮೂರಿನ ಕೆರೆಗಳಿಗೆ 10 ಕಿ.ಮೀ ದೂರದ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ನಾಲ್ಕೈದು ವರ್ಷದಿಂದ ಗ್ರಹಣ ಹಿಡಿದಿತ್ತು. ದಿಂಗಾಲೇಶ್ವರ ಶ್ರೀಗಳ ಕಾಳಜಿ, ಗ್ರಾಮಸ್ಥರ ಹೋರಾಟದಿಂದ ಯೋಜನೆ ಪೂರ್ಣಗೊಂಡಿದೆ. ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದ ‘ವಿಜಯವಾಣಿ’ ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಗ್ರಾಮಸ್ಥರು ಹೇಳಿದರು.
‘ನದಿಯಲ್ಲಿ ನೀರು ಹರಿಯುವ ಸಮಯ ಅಂದರೆ ಪ್ರತಿ ವರ್ಷ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಮಾತ್ರ ಜಾಕ್ವೆಲ್ನಿಂದ ನೀರೆತ್ತಲು ಅವಕಾಶವಿದೆ. ನೀರು ಹರಿಸುವ ಕಾರ್ಯ ಇನ್ನೊಂದು ತಿಂಗಳು ಮುಂದೂಡಿದ್ದರೆ ಈ ವರ್ಷವೂ ಕೆರೆಗೆ ನೀರು ಬರುತ್ತಿರಲಿಲ್ಲ. ಕೆರೆಗಳು ತುಂಬಿದರೆ ಅಂತರ್ಜಲಮಟ್ಟ ಹೆಚ್ಚುತ್ತದೆ. ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಕೆರೆ ಅಭಿವೃದ್ಧಿ ಸಮಿತಿ ಸಂಚಾಲಕ ಬಸವರೆಡ್ಡಿ ಹನಮರೆಡ್ಡಿ, ಗ್ರಾಪಂ ಸದಸ್ಯ ಮಹಾಂತೇಶ ಈರಗಾರ, ಪರಸಣ್ಣ ಒಚಿಟಿ, ಬಸವರಾಜ ಗೂಳಣ್ಣವರ, ಬಸವರಾಜ ನೀಲಣ್ಣವರ, ಜಗದೀಶ ಜೋಗೇರ, ರಾಜು ಬೆಂಚಳ್ಳಿ, ಇತರರಿದ್ದರು.