ಜಕ್ಕಲಮೊಡಗು ಜಲಾಶಯಕ್ಕೆ ಹರಿದ ನೀರು

jakkla
ಜಕ್ಕಲಮೊಡಗು ಜಲಾಶಯ
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರ ಜನತೆಯ ಜೀವ ಜಲಕ್ಕೆ ಆಸರೆಯಾಗಿರುವ ಜಕ್ಕಲಮಡುಗು ಜಲಾಶಯದಲ್ಲಿ 3 ಅಡಿಗಳಷ್ಟು ನೀರು ಹರಿದು ಬಂದಿದೆ.
ಕಳೆದ ವಾರದಿಂದ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಮಳೆ ನೀರು ಹರಿಯುತ್ತಿದ್ದು, ಬರಿದಾಗುವತ್ತ ಸಾಗಿದ್ದ ಜಲಾಶಯದ ಒಡಲಿಗೆ ಮಳೆರಾಯ ತುಸು ಚೇತರಿಗೆ ತರಿಸಿದ್ದಾನೆ. ಜಲಾಶಯ ಬರಿದಾಗಲಿದ್ದು, ಮುಂದಿನ ದಿನಗಳಲ್ಲಿ ಅವಳಿ ನಗರಗಳಾದ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಜನರ ಕುಡಿವ ನೀರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ತುಸು ದೂರವಾದಂತಾಗಿದೆ.
ಕೈ ಕೊಟ್ಟ ಮಳೆ: ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಜಕ್ಕಲಮೊಡಗು ಜಲಾಶಯದಲ್ಲಿ ಗಣನೀಯಮಟ್ಟದಲ್ಲಿ ನೀರು ಕುಸಿತ ಕಂಡಿತ್ತು. ಇದರಿಂದ ಜಲಾಶಯವನ್ನೇ ಅವಲಂಬಿಸಿರುವ ಎರಡೂ ನಗರಗಳ ನಿವಾಸಿಗಳಿಗೆ ಸಹಜವಾಗಿ ಆತಂಕ ಎದುರಾಗಿತ್ತು, ಕುಡಿವ ನೀರು ಪೂರೈಸುವ ನಗರ ಸಭೆ ಅಧಿಕಾರಿಗಳು ಚಿಂತೆಗೀಡಾಗಿದ್ದರು. ಏತನ್ಮಧ್ಯೆ ಕೆಲ ದಿನಗಳಿಂದ ಸುರಿದ ಮಳೆಗೆ ನೀರಿನ ಹರಿವು ಹೆಚ್ಚಾಗಿರುವುದು ತುಸು ನೆಮ್ಮದಿ ತರಿಸಿದೆ.
22 ಅಡಿಗೆ ಕುಸಿದಿತ್ತು: ಜಕ್ಕಲಮೊಡಗು ಜಲಾಶಯ 64 ಅಡಿಗಳವರೆಗೆ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ ಮಳೆ ಕೊರತೆಯಿಂದ ಡೆಡ್‌ಸ್ಟೋರೆಜ್ ಸೇರಿ ನೀರಿನ ಮಟ್ಟ 22 ಅಡಿಗೆ ಕುಸಿದಿತ್ತು. ಮಳೆ ನೀರಿನಿಂದ ಇದೀಗ 22ರಿಂದ 23 ಅಡಿಗಳವರೆಗೆ ನೀರಿನ ಮಟ್ಟ ಏರಿಕೆ ಕಂಡಿದೆ. ಇಷ್ಟು ಮಟ್ಟದ ನೀರು ಶೇಕರಣೆಯಾಗಿರುವುದರಿಂದ ಸುಮಾರು 1 ತಿಂಗಳವರೆಗೆ ಎರಡೂ ನಗರಗಳಿಗೆ ನೀರು ಪೂರೈಸಲು ತೊಂದರೆಯಾಗುವುದಿಲ್ಲ ಎಂಬುದು ನಗರಸಭೆ ಅಧಿಕಾರಿಗಳ ಸಮಾಧಾನವಾಗಿದೆ. ಇದರ ನಡುವೆ ಇನ್ನು ಕೆಲವು ದಿನ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿ ಹಾಗೂ ಮುಂದಿನ ಮಳೆಗಾಲದಲ್ಲಿ ನಿರೀಕ್ಷಿತ ಮಳೆಯಾಗಲಿದೆ ಎಂಬ ಭರವಸೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬುದು ಜನರ ಆಶಾಭಾವನೆಯಾಗಿದೆ.

ಎರಡು ನಗರಗಳಿಗೆ ನೀರು ಹಂಚಿಕೆ: ಜಕ್ಕಲ ಮಡುಗು ಜಲಾಶಯ ಸಂಗ್ರಹಣಾ ಸಾಮರ್ಥ್ಯ 4390 ದಶಲಕ್ಷ ಲೀಟರ್, ಶೇಖರಣಾ ವಿಸ್ತಿರ್ಣ 51.25 ಚ.ಮೀ. ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಶೇ. 68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ. ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ಕೋಡಿ ಹರಿಯುತ್ತದೆ. ಹಲವು ಮಳೆಗಾಲದಲ್ಲಿ ಜಲಾಶಯ ಕೋಡಿ ಹರಿದಿದೆ. ಜಕ್ಕಲಮಡುಗು ಜಲಾಶಯ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ ಈ ಜಲಾಶಯಕ್ಕೆ ನೆರೆಯ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಮಳೆ ನೀರು ಹರಿದು ಬರುವ ಕಾರಣಕ್ಕೆ ಜಕ್ಕಲಮಡುಗು ಜಲಾಶಯದ ನೀರಿನಲ್ಲಿ ತಮಗೂ ಪಾಲು ಬೇಕೆಂದು ದೊಡ್ಡಬಳ್ಳಾಪುರ ಜನತೆ ಬೇಡಿಕೆ ಇಟ್ಟ ಪರಿಣಾಮ ಜನಸಂಖ್ಯೆಗೆ ಅನುಗುಣವಾಗಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಉಭಯ ನಗರಗಳಿಗೆ ಈ ಜಲಾಶಯದ ನೀರಿನ ಹಂಚಿಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net