

ಚೇತನ್ ಚಕ್ಕೆರೆ ಬಿಡದಿ
ಕೆರೆಯ ತೂಬಿನಲ್ಲಿ ಬಿರುಕು ಬಿಟ್ಟು ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಯಾಗಿರುವ ಜತೆಗೆ ರಸ್ತೆಯೂ ನಾಶವಾಗಿದೆ.
ಬಿಡದಿ ವ್ಯಾಪ್ತಿಯ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆ ಎನಿಸಿಕೊಂಡಿರುವ ನಲ್ಲಿಗುಡ್ಡೆ ಕೆರೆಯ ತೂಬು ಗುರುವಾರ ರಾತ್ರಿ ತೆರೆದುಕೊಂಡು ಅಪಾರ ಪ್ರಮಾಣದ ನೀರು ವ್ಯರ್ಥವಾಗಿದ್ದು, ಸಾಕಷ್ಟು ರೈತರ ಜಮೀನಿಗೆ ನುಗ್ಗಿದೆ. ಬರಗಾಲದಲ್ಲೂ ಕೆರೆಯಲ್ಲಿ ನೀರು ಸಂಗ್ರಹವಾಗಿತ್ತು.
ಕೆರೆಯಿಂದ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆ ನಿರ್ಮಾಣ ಮಾಡಲಾಗಿದ್ದು. ಈ ಕಾಲುವೆಗೆ ಕೆರೆಯಿಂದ ನೀರು ಬಿಡಲು ಗೇಟ್‌ವಾಲ್ವ್ ಮಾದರಿಯಲ್ಲಿ ತೂಬು ನಿರ್ಮಾಣ ಮಾಡಲಾಗಿತ್ತು. ಆದರೆ, ಇದು ಬಹಳ ವರ್ಷಗಳಿಂದ ದುರಸ್ತಿಯಲ್ಲಿದ್ದ ಕಾರಣ ಸಣ್ಣ ಪ್ರಮಾಣದಲ್ಲಿ ನೀರು ಲೀಕ್ ಆಗುತ್ತಿದ್ದರಿಂದ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ದುರಸ್ತಿ ಮಾಡುವಂತೆ ಮನವಿ ಮಾಡಿದ್ದರು. ಇಲಾಖೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿದ್ದರು. ಈಗಾಗಲೇ ಕೆರೆಯಲ್ಲಿ ಅರ್ಧದಷ್ಟು ನೀರು ಶೇಖರಣೆಯಾಗಿತ್ತು. ಎರಡು ದಿನಗಳಿಂದ ಸುರಿದ ಮಳೆಗೆ ಅಪಾರ ಪ್ರಮಾಣದ ನೀರು ಶೇಖರಣೆಯಾಗಿ ನೀರಿನ ಪ್ರಮಾಣ ಹೆಚ್ಚಾಗಿ ತೂಬು ಇದ್ದಕ್ಕಿದ್ದಂತೆ ತೆರೆದುಕೊಂಡು ನೀರು ಕಾಲುವೆಗಳಲ್ಲಿ ಹರಿದಿದೆ.
ಅಧಿಕಾರಿಗಳ ನಿರ್ಲಕ್ಷ್ಯ
ಕೆರೆಯ ತೂಬು ದುರಸ್ತಿ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇಲಾಖೆಯು ಕಾಮಗಾರಿ ಕೈಗೆತ್ತಿಕೊಂಡು ಕೆಲಸ ಮಾಡಲಾಗುತಿತ್ತು. ಕಾಮಗಾರಿ ಮಾಡುವಲ್ಲಿ ವಿಳಂಬ ಮಾಡಿದ್ದರ ಪರಿಣಾಮ ನೀರು ವ್ಯರ್ಥವಾಗಿದೆ. ಬೇಸಿಗೆಗಾಲದಲ್ಲಿ ಕಾಮಗಾರಿ ನಡೆಸದೆ ಮಳೆಗಾಲದಲ್ಲಿ ದುರಸ್ತಿಗೆ ಅಧಿಕಾರಿಗಳು ಮುಂದಾಗಿರುವ ಪರಿಣಾಮ ಕೆರೆ ನೀರು ಪ್ರಯೋಜನಕ್ಕೆ ಬಾರದಂತೆ ಪೋಲಾಗಿದೆ ಎಂಬುದು ರೈತರ ಆರೋಪ.
ಕಾಲುವೆ, ಬೆಳ ನಾಶ
ಕೆರೆಯಿಂದ ಅಪಾರ ಪ್ರಮಾಣದ ನೀರು ಕಾಲುವೆಗೆ ಹರಿದು ಬಂದ ಕಾರಣ ಕಾಲುವೆಯ ಎಡ-ಬಲದ ಕಲ್ಲುಗಳು ಕಿತ್ತಿವೆ. ಕೆಲವು ಕಡೆ ಕಾಲುವೆಗೆ ಮಾಡಿದ್ದ ಕಾಂಕ್ರೀಟ್ ಹಾನಿಯಾಗಿದೆ. ಕಾಲುವೆಯಲ್ಲಿ ಗಿಡ-ಗಂಟಿ ಬೆಳೆದಿದ್ದರ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲು ಸ್ಥಳಾವಕಾಶ ಇಲ್ಲದೆ ರಸ್ತೆ ಮೇಲೆ ಹರಿದಿದ್ದು ರಸ್ತೆಯೂ ಹಾಳಾಗಿದೆ. ಕೆಲವು ಕಡೆ ಜಮೀನಿಗೂ ನೀರು ನುಗ್ಗಿ ಭತ್ತ ಹಾನಿಯಾಗಿದೆ.
ಕೆರೆಯನ್ನು ಆಶ್ರಯಿಸಿ ಸಾಕಷ್ಟು ರೈತರು ಬೆಳೆ ಬೆಳೆಯುತ್ತಾರೆ. ಕೆರೆಯ ತೂಬು ಸುಮಾರು 10 ವರ್ಷಗಳಿಂದ ದುರಸ್ತಿಯಲ್ಲಿತ್ತು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಗಮನ ಸೆಳೆಯಲಾಗಿತ್ತು. ಇದರ ಭಾಗವಾಗಿ ಅಧಿಕಾರಿಗಳು ದುರಸ್ತಿ ಕಾರ್ಯ ಪ್ರಾರಂಭಿಸಿದ್ದರು. ತಿಂಗಳಿನಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಮಳೆ ಪ್ರಮಾಣ ಹೆಚ್ಚಾದ ಕಾರಣ ಕೆರೆಗೆ ನೀರು ಹೆಚ್ಚಾಗಿ ಪ್ರಯೋಜನಕ್ಕೆ ಬಾರದೆ ವ್ಯರ್ಥವಾಗಿದೆ. ಇದರಿಂದ ಕಾಲುವೆ, ರಸ್ತೆ, ರೈತರ ಬೆಳೆ ನಾಶವಾಗಿದೆ ಇದಕ್ಕೆ ಯಾರು ಹೊಣೆ.
ನರಸಿಂಹಯ್ಯ, ಸ್ಥಳೀಯ
ನಲ್ಲಿಗುಡ್ಡೆ ಕೆರೆಯ ಏರಿ ದುರಸ್ತಿ ಬಗ್ಗೆ ಇಲಾಖೆಗೆ ಅರ್ಜಿ ಬಂದ ಕಾರಣದಿಂದಾಗಿ ತೂಬು ದುರಸ್ತಿ ಮಾಡುವ ಕೆಲಸ ನಡೆಸಲಾಗುತಿತ್ತು. ಕೆಲಸ ಪೂರ್ಣವಾಗಿ ಮುಗಿದು ಕಬ್ಬಿಣದ ರಾಡ್ ಅಳವಡಿಸಬೇಕಾಗಿತ್ತು. ಗುರುವಾರ ರಾತ್ರಿ ಕೆರೆಗೆ ಹೆಚ್ಚಿನ ನೀರು ಹರಿದು ಬಂದ ಕಾರಣ ನೀರಿನ ಪ್ರಮಾಣ ಹೆಚ್ಚಾಗಿ ತೂಬಿನ ಮೂಲಕ ನೀರು ಹೊರ ಹೋಗಿದೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ರಾಡ್ ಅಳವಡಿಸಿ ಗೇಟ್ ಬಂದ್ ಮಾಡಿ ನೀರು ನಿಲ್ಲಿಸಲಾಗಿದೆ.
ಕೊಟ್ರೇಶ್, ಎಇಇ, ಸಣ್ಣ ನೀರಾವರಿ ಇಲಾಖೆ, ರಾಮನಗರ