

ಹೊನ್ನಾಳಿ: ಕಳೆದ ಮೂರ‌್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿಯಿತು. ಬೆಳಗ್ಗೆ 8ರಿಂದ 12 ಗಂಟೆವರೆಗೆ ಬಿಡುವು ನೀಡಿತ್ತು. ಅದರೆ, 12ರ ನಂತರ ಮತ್ತೆ ಧಾರಾಕಾರವಾಗಿ ಸುರಿಯಿತು.
ಪರಿಸ್ಥಿತಿ ನೋಡಿಕೊಂಡು ಶಾಲೆಗೆ ರಜಾ ನೀಡಲು ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ತಿಳಿಸಿದರು.
ಸವಳಂಗದಲ್ಲಿ ಅಧಿಕ: ಹೊನ್ನಾಳಿ 28.6 ಮಿಮೀ, ಸವಳಂಗ 35, ಬೆಳಗುತ್ತಿ 36.6, ಹರಳಹಳ್ಳಿ 28.4, ಗೋವಿನಕೋವಿ 25.4, ಕುಂದೂರು 20.6, ಸಾಸ್ವೆಹಳ್ಳಿ 24.6 ಮಿ.ಮೀ. ಮಳೆ ದಾಖಲೆಯಾಗಿದೆ.
ಶಾಲೆಗಳ ಛಾವಣಿ ಸೋರಿಕೆ:
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹೊನ್ನಾಳಿ ತಾಲೂಕಿನ ರಾಂಪುರ, ಉರುಳಹಳ್ಳಿ, ಸಾಸ್ವೇಹಳ್ಳಿ, ಆನೆಕಲ್ಲು, ಚಿಕ್ಕಗೋಣಿಗೆರೆ ಹಾಗೂ ನ್ಯಾಮತಿ ತಾಲೂಕಿನ ಗಡೆಕಟ್ಟೆ, ನ್ಯಾಮತಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತಿತರ 30ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ಸೂರುತ್ತಿವೆ.
ತಾಲೂಕಿನ ಸೊರಟೂರು ಮತ್ತಿತರ ಕೆಲ ಸರ್ಕಾರಿ ಶಾಲಾ ಮೈದಾನಗಳು ಜಲಾವೃತಗೊಂಡಿವೆ. ಇದರಿಂದ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಶಾಲಾ ಕೊಠಡಿಗಳನ್ನು ದುರಸ್ತಿ ಅಥವಾ ನೂತನ ಕೊಠಡಿಗಳನ್ನು ನಿರ್ಮಾಣ ಮಾಡುವಂತೆ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಪಾಲಕರು ಆಗ್ರಹಿಸಿದರು.
ಅಪಾಯ ಮಟ್ಟದತ್ತ ನೀರಿನ ಹರಿವು: ಮಲೆನಾಡಿನ ತೀರ್ಥಹಳ್ಳಿ, ಮಂಡಗದ್ದೆ ಮತ್ತಿತರ ಕಡೆ ಮಳೆ ಸುರಿಯುತ್ತಿದ್ದು, ಹೊನ್ನಾಳಿ ತಾಲೂಕಿನಲ್ಲಿ ಹರಿದು ಹೋಗುವ ತುಂಗಭದ್ರಾ ನದಿ ನೀರಿನ ಮಟ್ಟ 10.550 ಮೀಟರ್‌ಗೇರಿದೆ. ಅಪಾಯ ಮಟ್ಟ ತಲುಪಲು 2 ಮೀಟರ್ ಬಾಕಿ ಇದೆ.
ಶಿವಮೊಗ್ಗದ ತುಂಗಾ ಜಲಾಶಯದಿಂದ 68.750 ಕ್ಯೂಸೆಕ್ ನೀರು ಬಿಟ್ಟಿದ್ದಾರೆ. ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿ ನೀರಿನ ಮಟ್ಟ ಮತ್ತಷ್ಟು ಏರುವ ಸಾಧ್ಯತೆ ಇದೆ. ಪಟ್ಟಣದ ನದಿಪಾತ್ರದ ಪ್ರದೇಶಗಳ ನಿವಾಸಿಗಳನ್ನು ಹೊನ್ನಾಳಿಯ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಲು ತಾಲೂಕು ಆಡಳಿತ ಸಿದ್ಧವಾಗಿದೆ.