

ತುಮಕೂರು: ಗ್ರಾಮೀಣ ಜನರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಜಿಲ್ಲೆಯಲ್ಲಿ ಸ್ಥಾಪಿಸಿರುವ 1491 ಘಟಕಗಳಲ್ಲಿ 198 ಘಟಕಗಳು ಕೆಟ್ಟಿವೆ.
ಜಿಲ್ಲಾ ಪಂಚಾಯಿತಿ ಲೆಕ್ಕದಲ್ಲಿಯೇ 198 ಘಟಕಗಳು ಸ್ಥಗಿತಗೊಂಡಿದ್ದು, ವಾಸ್ತವದಲ್ಲಿ 500ಕ್ಕೂ ಹೆಚ್ಚು ಘಟಕಗಳ ನಿರ್ವಹಣೆಯಲ್ಲಿ ಲೋಪಗಳಾಗಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಶುದ್ಧ ನೀರಿಗೆ ಒಗ್ಗಿರುವ ಜನರ ಆರೋಗ್ಯ ಕೈಕೊಟ್ಟಿದ್ದು ಆಸ್ಪತ್ರೆಯಲ್ಲಿ ಜನಜಂಗುಳಿ ಸಾಮಾನ್ಯವಾಗಿದೆ.
ಹಿಂದೂಪುರದ ಶ್ರೀಸಾಯಿ ವಾಟರ್ ಟ್ರೀಟ್ಮೆಂಟ್, ಹೈದರಾಬಾದ್ ಮೂಲದ ವಸ್ಮಾರ್ಟ್ ಇಂಡಿಯಾ ಪ್ರೈವೇಟ್ ಲಿ. ಹಾಗೂ ಬೆಂಗಳೂರಿನ ಪ್ಯಾನ್ ಏಷಿಯಾ ವೈಲ್ಡ್ ವರ್ಡ್ ಕಂಪನಿಗಳು ನಿರ್ವಹಣೆಯ ಹೊಣೆ ಹೊತ್ತಿದ್ದರೂ ಘಟಕಗಳ ಕಡೆ ತಿರುಗಿಯೂ ನೋಡಿಲ್ಲ.
ಕೆಟ್ಟು ನಿಂತಿರುವ ಘಟಕಗಳನ್ನು ಸರಿಪಡಿಸಲು ಜಲಸಿರಿ ಮಿನರಲ್ ವಾಟರ್ ಸಿಸ್ಟಂಗೆ ಟೆಂಡರ್ ನೀಡಿದ್ದು ಅವರು 272 ಘಟಕಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಏಜೆನ್ಸಿಗಳ ಕಡೆ ಕೈತೋರಿಸುವ ಅಧಿಕಾರಿಗಳಿಂದ ಗ್ರಾಮೀಣ ಜನರು ತೊಂದರೆ ಪಡುವಂತಾಗಿದೆ.
ಕುಡಿಯುವ ನೀರಿನಲ್ಲಿ ಪ್ಲೋರೈಡ್ ಹೆಚ್ಚಿನ ಪ್ರಮಾಣದಲ್ಲಿರುವ ಸಾಕಷ್ಟು ಗ್ರಾಮಗಳಲ್ಲಿ ಶುದ್ಧನೀರಿನ ಘಟಕ ಕೈಕೊಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ, ಜಿಪಂ ಸಾಮನ್ಯಸಭೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾದರೂ ಪ್ರಯೋಜನವಾಗಿಲ್ಲ. ಏಜೆನ್ಸಿಗಳ ಕಡೆ ಕೈತೋರಿಸುವ ಅಧಿಕಾರಿಗಳು ಜನರಿಗೆ ಶುದ್ಧ ನೀರು ನೀಡುವ ಬಗ್ಗೆ ಯೋಚಿಸುತ್ತಿಲ್ಲ. ಜನಪ್ರತಿನಿಧಿಗಳು ಸಭೆಯಲ್ಲಿಯಷ್ಟೇ ಅಬ್ಬರಿಸಿ, ಬೊಬ್ಬರಿದು ಹೋಗುತ್ತಿದ್ದು ನಂತರ ಅಧಿಕಾರಿಗಳ ಕಿವಿಹಿಂಡಿ ಕೆಲಸ ಮಾಡಿಸುತ್ತಿಲ್ಲ.
ಅಧಿಕಾರಿಗಳಿಗೆ ಸರಿಪಡಿಸುವ ಆಸಕ್ತಿ ಇಲ್ಲ: ಕೊಳವೆಬಾವಿ ಕೊರೆದು, ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ತೋರಿಸುವ ಆಸಕ್ತಿಯನ್ನು ಅದರ ನಿರ್ವಹಣೆಗೆ ಅಧಿಕಾರಿಗಳು ತೋರುವುದಿಲ್ಲ. 2019ರ ಅ.19ರಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸೂಚಿಸಿದಂತೆ ಡಿ.26ರಂದು ಜಿಲ್ಲಾ ಪಂಚಾಯಿತಿ ಸಿಇಒ ಸಭೆ ನಡೆಸಿ ಘಟಕಗಳ ದುರಸ್ತಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದರೂ 2020 ಜ.18ರಂದು ನಡೆದ ಮತ್ತೊಂದು ಕೆಡಿಪಿ ಸಭೆಯಲ್ಲಿ ಅದಕ್ಕಿಂತ ಹೆಚ್ಚು ಘಟಕಗಳು ಕೆಟ್ಟು ನಿಂತಿರುವ ವರದಿಯನ್ನು ಇದೇ ಅಧಿಕಾರಿಗಳು ನೀಡಿದ್ದರು.
ಸಚಿವರ ಕ್ಷೇತ್ರದಲ್ಲಿಯೂ ಇದೆ ಸಮಸ್ಯೆ: ಪ್ಲೊರೈಡ್ ಅತೀ ಹೆಚ್ಚಿರುವ ಪಾವಗಡ ತಾಲೂಕಿನಲ್ಲಿಯೂ ಬರೋಬ್ಬರಿ 41 ಆರ್‌ಒ ಘಟಕಗಳು ಸ್ಥಗಿತವಾಗಿ ತಿಂಗಳುಗಳೇ ಕಳೆದಿವೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿಯೇ ಶೇ.25 ಘಟಕಗಳು ಕೆಟ್ಟು ನಿಂತಿದ್ದು ಕೇಳುವವರು ಯಾರೂ ಇಲ್ಲ. ಶಿರಾದಲ್ಲಿ 36 ಘಟಕ ಮೌನವಾಗಿವೆ.
ಅಧಿಕಾರಿಗಳ ವಿಶೇಷ ಸಭೆ ನಡೆಸಿ ಶುದ್ಧ ನೀರಿನ ಘಟಕಗಳನ್ನು ಸರಿಪಡಿಸಲು ಒಂದು ತಿಂಗಳ ಗಡುವು ನೀಡಲಾಗಿದೆ. 2019-20ರ ಕ್ರಿಯಾ ಯೋಜನೆಯಲ್ಲಿ ಉಳಿಯುವ ಮೊತ್ತ ಬಳಸಿಕೊಳ್ಳಲು ಸೂಚಿಸಲಾಗಿದೆ. ಶುಭಾಕಲ್ಯಾಣ್ ಸಿಇಒ, ಜಿಪಂ