

ಬೇಲೂರು: ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ರೋಟರಿ ಕ್ಲಬ್ ಶ್ರಮಿಸುತ್ತಿದ್ದು, ಇದರ ಭಾಗವಾಗಿ ಶ್ರೀ ಶಿವನಂಜಂಡೇಶ್ವರ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ನೀಡುತ್ತಿದ್ದೇವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಂಭೋಗೌಡ ಹೇಳಿದರು.
ತಾಲೂಕಿನ ಇಬ್ಬೀಡು ಶ್ರೀ ಶಿವನಂಜುಂಡೇಶ್ವರ ಪ್ರೌಢಶಾಲೆಗೆ ರೋಟರಿ ಕ್ಲಬ್‌ನಿಂದ ವಾಟರ್ ಫಿಲ್ಟರ್ ಕೊಡುಗೆ ನೀಡಿ ಮಾತನಾಡಿದ ಅವರು, ಬೇಲೂರು ರೋಟರಿ ಕ್ಲಬ್ ಸಂಸ್ಥಾಪಕ ದಿ.ಗಂಗಯ್ಯ ಹೆಗಡೆ ಅವರು ರೋಟರಿ ಕ್ಲಬ್‌ಗೆ ನೀಡಿರುವ ಎಂಡೋಮೆಂಟ್ ಹೂಡಿಕೆಯಿಂದ ಬಂದ ಹಣದಲ್ಲಿ ವಿದ್ಯಾರ್ಥಿಗಳು ಶುದ್ಧ ನೀರನ್ನು ಕುಡಿಯಬೇಕೆಂಬ ಅವರ ಆಸೆಯಂತೆ ಪ್ರತಿವರ್ಷ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುತ್ತಿದ್ದು, ಈ ಬಾರಿ ಇಬ್ಬೀಡು ಶಿವನಂಜುಂಡೇಶ್ವರ ಶಾಲೆಗೆ ವಿತರಿಸುತ್ತಿದ್ದೇವೆ ಎಂದರು.
ರೋಟರಿ ಕ್ಲಬ್ ಜೋನಲ್ ಲೆಫ್ಟಿನೆಂಟ್ ವೈ.ಡಿ.ಲೋಕೇಶ್ ಮಾತನಾಡಿ, ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಅಂಗವಾಗಿ ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗಾಗಿ ವಾಟರ್ ಫಿಲ್ಟರ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು, ಶಿಕ್ಷಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜು, ಖಜಾಂಚಿ ಎಚ್.ಕೆ.ರಮೇಶ್, ಸದಸ್ಯರಾದ ಮೊಗಪ್ಪಗೌಡ, ರಾಜೇಗೌಡ, ಚಿದನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸೋಮಣ್ಣ, ಚಂದ್ರಶೇಖರ್, ಮುಖ್ಯ ಶಿಕ್ಷಕ ಬಸವರಾಜ ಮುನವಳಿ ಇದ್ದರು.