ಮಗನಿಗೆ ಈಜು ಕಲಿಸಲು ಹೋಗಿ ನೀರಿನಲ್ಲಿ ಮುಳುಗಿದ ಅಪ್ಪ-ಮಗ

death 31 mar 20
Published on

ಬೆಳಗಾವಿ: ಬಾವಿಯಲ್ಲಿ ಮಗನಿಗೆ ಈಜು ಕಲಿಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಅಪ್ಪ ಹಾಗೂ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸತ್ತೇಪ್ಪ ಕಮತಿ (75) ಹಾಗೂ ಪರಶುರಾಮ ಕಮತಿ (15) ಮೃತಪಟ್ಟವರು.

ತಂದೆ ಸತ್ತೇಪ್ಪ ಕಮತಿ ಈಜು ಬಾರದ ಮಗನಿಗೆ ಈಜು ಕಲಿಸಲು ಬಾವಿಗೆ ಇಳಿದಿದ್ದರು. ಮಗ ಪರಶುರಾಮನಿಗೆ ದಿಂಡಿ ಕಟ್ಟಿ ಬಾವಿಗೆ ಇಳಿಸಿದ್ದರು. ದಿಂಡಿಯ ಸಹಾಯದಿಂದ ಈಜಾಡುತ್ತಿದ್ದ ಪರಶುರಾಮ ದಿಂಡಿ ಹರಿದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ಈ ವೇಳೆ ಆಶ್ರಯಕ್ಕಾಗಿ ಪಕ್ಕದಲ್ಲೇ ಇದ್ದ ಅಪ್ಪನನ್ನು ಬಿಗಿಯಾಗಿ ಅಪ್ಪಿಕೊಂಡ. ಇದರಿಂದ ಸತ್ತೇಪ್ಪ ಅವರಿಗೆ ಈಜು ಬಂದರೂ ಈಜಲು ಸಾಧ್ಯವಾಗದೆ ಮಗನೊಂದಿಗೆ ನೀರಿನಲ್ಲಿ ಮುಳುಗಿದರು.

ನೀರಿನಲ್ಲಿ ಅಪ್ಪ ಹಾಗೂ ಅಣ್ಣ ಮುಳುಗುತ್ತಿದ್ದನ್ನು ಬಾವಿಯ ಮೇಲೆ ನಿಂತು ನೋಡುತ್ತಿದ್ದ ಮತ್ತೊಬ್ಬ ಮಗ ಸಹಾಯಕ್ಕಾಗಿ ಸ್ಥಳದಲ್ಲಿದ್ದವರನ್ನು ಕೂಗಿದ. ಅವರು ಆಗಮಿಸುವಷ್ಟರಲ್ಲಿ ಇಬ್ಬರು ಮುಳುಗಿ ಮೃತಪಟ್ಟಿದ್ದರು.

ಘಟಪ್ರಭಾ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net