ಹಂದಿಗೋಣದಲ್ಲಿ ಮನೆಗಳಿಗೆ ನುಗ್ಗಿದ ನೀರು

water
Published on

ಕುಮಟಾ: ತಾಲೂಕಿನ ಕಲಭಾಗ ಪಂಚಾಯಿತಿ ವ್ಯಾಪ್ತಿಯ ಹಂದಿಗೋಣದಲ್ಲಿ ಗುರುವಾರ ಮಳೆಯಿಂದಾಗಿ ತುಂಬಿ ಹರಿದ ದೊಡ್ಡ ಕೋಡಿಯ ನೀರು ಕೆಲ ಮನೆಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ.

ಇಲ್ಲಿನ ನಾಗೇಶ ಮುಕ್ರಿ, ನಾಗೇಶ ಪಟಗಾರ, ದೇವಪ್ಪ ಪಟಗಾರ, ಮಂಜುನಾಥ ಪಟಗಾರ, ರಾಮದಾಸ ಹೆಗಡೆ ಅವರ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ್ದು, ಸೂಕ್ತ ಪರಿಹಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಉಳಿದಂತೆ ಗುರುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ಮರಗಳು ಉರುಳಿ ಬಿದ್ದಿವೆ. ಘಟನೆಯಲ್ಲಿ ಎರಡಂತಸ್ತಿನ ಕಟ್ಟಡದ ಛಾವಣಿ, ಗೂಡಂಗಡಿ, ಟ್ಯಾಕ್ಸಿ ಸ್ಟ್ಯಾಂಡ್ ಕಟ್ಟೆ ಹಾಗೂ ಕಾರೊಂದರ ಮೇಲೆ ಮರಗಳು ಉರುಳಿ ಬಿದ್ದಿವೆ. ಮಾಸ್ತಿಕಟ್ಟೆ ವೃತ್ತದ ಬಳಿಯೂ ಬೃಹತ್ ಮರದ ಟೊಂಗೆಗಳು, ಜಾಹೀರಾತು ಫಲಕಗಳು ಹೆದ್ದಾರಿಯ ಮೇಲೆ ಉರುಳಿದ್ದು, ಗಟಾರಗಳು ಕಟ್ಟಿಕೊಂಡು ಹೆದ್ದಾರಿಯ ಮೇಲೆ ನೀರು ಹರಿದಿದೆ.

ಗಾಳಿ-ಮಳೆಗೆ 29 ಮರಗಳು ಅಲ್ಲಲ್ಲಿ ಮುರಿದು ಬಿದ್ದಿದ್ದು, ಹಲವೆಡೆ ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆಯಿಂದಾಗಿ ಅಘನಾಶಿನಿ ನದಿ ತುಂಬಿ ಹರಿಯುತ್ತಿದ್ದು, ಇದೇ ರೀತಿ ಘಟ್ಟ ಭಾಗದಲ್ಲೂ ಮಳೆಯಾದರೆ ಪ್ರವಾಹದ ಭೀತಿ ಎದುರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net