

ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ತುತ್ತಾಗಿರುವ ಕರ್ನಾಟಕದಲ್ಲಿ ವಾಟರ್ ಎಮರ್ಜೆನ್ಸಿ ತಲೆದೋರಿದೆ. ಮಳೆ ಇಲ್ಲದೆ ಬೆಳೆ ನೆಲ ಕಚ್ಚಿರುವುದು ಒಂದೆಡೆಯಾದರೆ, ಹಳ್ಳ ಕೊಳ್ಳ, ಜಲಾಶಯಗಳು ಬರಡಾಗಿರುವುದರಿಂದ ಮುಕ್ಕಾಲು ರಾಜ್ಯ ಮರುಭೂಮಿಯಂತೆ ಕಾಣುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಂಕಷ್ಟ ತಲೆದೋರಿದ್ದು, ಇನ್ನೂ ಮೂರು ತಿಂಗಳು ಜನ-ಜಾನುವಾರುಗಳ ಕತೆಯೇನೆಂಬ ಚಿಂತೆ ಕಾಡಲಾರಂಭಿಸಿದೆ.
ಜಲಾಶಯಗಳು ಬರಿದು: ಇಡಿ ರಾಜ್ಯಕ್ಕೆ ಕುಡಿಯುವ ನೀರು, ಕೃಷಿ ಮತ್ತು ಜಲವಿದ್ಯುತ್ ಅವಶ್ಯಕತೆಗಳನ್ನು ಪೂರೈಸುವ ಅಷ್ಟೂ ಜಲಾಶಯಗಳು ಬರಿದಾಗಿದ್ದು, ತಳ ಕಾಣುವ ಸ್ಥಿತಿ ಬಂದಿದೆ. ಕೆಆರ್ಎಸ್, ಆಲಮಟ್ಟಿ, ತುಂಗಭದ್ರಾ, ನಾರಾಯಣಪುರ, ಹಾರಂಗಿ ಸಹಿತ ನಾಡಿನ ಎಲ್ಲ ದೊಡ್ಡ-ಸಣ್ಣ ಜಲಾಶಯಗಳು ಬರಿದಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿದ್ದ ನೀರಿನ ಪ್ರಮಾಣದ ಅರ್ಧಭಾಗವೂ ಈ ಬಾರಿ ಉಳಿದಿಲ್ಲ.
ಕೆರೆಕಟ್ಟೆ ಖಾಲಿ: ರಾಜ್ಯಾದ್ಯಂತ 3684 ಕೆರೆ ಕಟ್ಟೆ ಬತ್ತಿ ಹೋಗಿದೆ. 125 ತಾಲೂಕುಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. 23 ಜಿಲ್ಲೆಗಳ 98 ತಾಲೂಕುಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ಖಾಸಗಿ ಟ್ಯಾಂಕರ್, ಕೊಳವೆ ಬಾವಿಗಳಿಗೆ ಮೊರೆ ಹೋಗಲಾಗಿದೆ. ಒಟ್ಟಾರೆ 7408ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಭೀತಿ ಕಾಡುತ್ತಿದೆ. ನಗರ ಪ್ರದೇಶದ 1115 ವಾರ್ಡ್ಗಳಿಗೆ ಜಲಾಘಾತ ಎದುರಾಗಿದೆ.
ಕಾವೇರಿ ಹೆಸರಲ್ಲಿ ಕಣ್ಣಾಮುಚ್ಚಾಲೆ!
ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿರುವ ನಡುವೆಯೇ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಡುತ್ತಿರುವ ಆರೋಪ ಕೇಳಿಬಂದಿದೆ. ಕೆಆರ್ಎಸ್ ಜಲಾಶಯದಿಂದ ಶನಿವಾರ ಏಕಾಏಕಿ ನೀರಿನ ಹರಿವು ಹೆಚ್ಚಿಸಲಾಗಿತ್ತು. ಇದು ತಮಿಳ್ನಾಡಿಗೆ ನೀರು ಬಿಡುವ ಸಂಚೆಂದು ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿತ್ತು. ಜತೆಗೆ ಮೈಸೂರು, ಮಂಡ್ಯ ಭಾಗದಲ್ಲಿ ರೈತರು ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ನೀರು ಬಿಟ್ಟಿದ್ದು ತಮಿಳುನಾಡಿಗಲ್ಲ, ಬೆಂಗಳೂರಿಗೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಕೆಆರ್ಎಸ್ ಹೊರ ಹರಿವು ಹೆಚ್ಚಾದ ಬಳಿಕ ಮಳವಳ್ಳಿ ಗಡಿಭಾಗದ ಶಿವ ಅಣೆಕಟ್ಟೆಯಲ್ಲಿ 1.5 ಅಡಿಯಷ್ಟು ನೀರಿನ ಮಟ್ಟ ಏರಿಕೆ ಆಗಿದೆ. ಶನಿವಾರ 4845 ಕ್ಯೂಸೆಕ್ನಷ್ಟಿದ್ದ ಹೊರ ಹರಿವು ಭಾನುವಾರ ಸಂಜೆ 1008 ಕ್ಯೂಸೆಕ್ಗೆ ಇಳಿಕೆ ಆಗಿದೆ. ಇನ್ನು ಕುಡಿವ ನೀರು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ.
"ನೀರಿಗಾಗಿ ಜನರು ಬಿಂದಿಗೆ ಹಿಡಿದುಕೊಂಡು ಬೀದಿಗೆ ಇಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದು ನಾಚಿಕೆಗೇಡು" | ಆರ್. ಅಶೋಕ್ ವಿಪಕ್ಷ ನಾಯಕ"ಶಿವ ಡ್ಯಾಂನಲ್ಲಿ ನೀರೆತ್ತಲು ಕೆಆರ್ಎಸ್ನಿಂದ ನೀರು ಹರಿಸಲಾಗಿದೆ. ನಮ್ಮ ರೈತರಿಗೇ ನೀರು ಕೊಡಲು ಆಗುತ್ತಿಲ್ಲ. ಇನ್ನು ತಮಿಳುನಾಡಿಗೆ ನೀರು ಕೊಡುವುದು ಎಲ್ಲಿಂದ?" | ಡಿ.ಕೆ.ಶಿವಕುಮಾರ್ ಡಿಸಿಎಂಕೊಳವೆ ಬಾವಿ ಮೊರೆ: ಕೆರೆಕಟ್ಟೆ ಬತ್ತಿರುವುದರಿಂದ 3471 ಕೊಳವೆ ಬಾವಿ ಮಾಲೀಕರ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇನ್ನು ಜಾನುವಾರು ಗಳಿಗೆ ನೀರು, ಮೇವು ಪೂರೈಸುವುದೇ ಸರ್ಕಾರಕ್ಕೆ ಸವಾಲಾಗಿದೆ. ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೃಷಿ ಕಾರ್ಯ ಬಹುತೇಕ ಸ್ಥಗಿತಗೊಂಡಿದೆ. ಈ ಹಿಂದೆ ಬೇಸಿಗೆ ಬೆಳೆ ಬೆಳೆಯುತ್ತಿದ್ದ ರೈತರು ಕುಡಿಯುವುದಕ್ಕೂ ನೀರಿಲ್ಲದ ಪರಿಣಾಮ ತಲೆ ಮೇಲೆ ಕೈ ಇಟ್ಟು ಕೂರುವ ಸ್ಥಿತಿ ತಲುಪಿದ್ದಾರೆ.
ಕಾವೇರಿ ಹರಿವಿನ ವಾಸ್ತವ: ಕೆಆರ್ಎಸ್ ಹೊರಹರಿವು ಶನಿವಾರ 4,845 ಕ್ಯೂಸೆಕ್ ಇತ್ತು. ಭಾನುವಾರ ಸಂಜೆ ಹೊತ್ತಿಗೆ 1008 ಕ್ಯೂಸೆಕ್ಗೆ ಇಳಿಕೆ, ಶಿವ ಅಣೆಕಟ್ಟೆಯಲ್ಲಿ ಸದ್ಯ 1.5 ಅಡಿ ನೀರು ಸಂಗ್ರಹವಾಗಿದೆ, ಡ್ಯಾಂನ +80 ಮಟ್ಟದ ಗೇಟುಗಳನ್ನು ಸಂಪೂರ್ಣ ಮುಚ್ಚಲಾಗಿದೆ, +50 ಮಟ್ಟದ ಗೇಟುಗಳ ಮೂಲಕ ನೀರು ಹರಿಸಲಾಗುತ್ತಿದೆ. ನೀರು ಪೋಲಾಗದಂತೆ ಶಿವ ಅಣೆಕಟ್ಟೆಯಲ್ಲಿ ವಿಶೇಷ ತಂಡ ನಿಗಾ
ಕೆರೆ ಕಟ್ಟೆ ಸ್ಥಿತಿ ಏನು?: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಕೆರೆಕಟ್ಟೆ ಖಾಲಿ ರಾಜ್ಯಾದ್ಯಂತ ಬತ್ತಿ ಹೋಗಿವೆ 3685 ಕೆರೆ ಕಟ್ಟೆ 25 ತಾಲೂಕುಗಳಲ್ಲಿ ಅಂತರ್ಜಲ ತೀವ್ರ ಕುಸಿತ 23 ಜಿಲ್ಲೆಗಳ 98 ತಾಲೂಕುಗಳಲ್ಲಿ ನೀರಿನ ಸಮಸ್ಯೆ 12 ಗ್ರಾಪಂ ವ್ಯಾಪ್ತಿಯ ನೂರಾರು ಗ್ರಾಮ ತತ್ತರ ಟ್ಯಾಂಕರ್, ಖಾಸಗಿ ಕೊಳವೆ ಬಾವಿಗಳಿಗೆ ಮೊರೆ 75 ಹಳ್ಳಿಗಳಿಗೆ 204 ಟ್ಯಾಂಕರ್ಗಳಿಂದ ನೀರು 100 ಗ್ರಾಮಕ್ಕೆ 596 ಖಾಸಗಿ ಕೊಳವೆ ಬಾವಿ ನೀರು 20 ನಗರಗಳ 96 ವಾರ್ಡ್ಗೆ 68 ಟ್ಯಾಂಕರ್ ಬಳಕೆ 29 ವಾರ್ಡ್ಗಳಿಗೆ ಖಾಸಗಿ ಕೊಳವೆ ಬಾವಿ ನೀರು.
ಸರ್ಕಾರದ ಸಿದ್ಧತೆ ಏನು?: 7408 ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಭೀತಿ ನಗರ ಪ್ರದೇಶದ 1115 ವಾರ್ಡ್ಗಳಿಗೆ ಜಲಾಘಾತ ವಿವಿಧ ಜಿಲ್ಲೆಗಳಲ್ಲಿ 7340 ಖಾಸಗಿ ಕೊಳವೆ ಬಾವಿ ವಶ 471 ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಕೊಳವೆ ಬಾವಿ ಗುರುತಿಸುವಿಕೆ ಖಾಸಗಿ ಬಾವಿ ಮಾಲೀಕರೊಂದಿಗೆ ಒಪ್ಪಂದ ಪ್ರಕ್ರಿಯೆ ಸದ್ಯ ರಾಜ್ಯದಲ್ಲಿ 1.39 ಕೋಟಿ ಟನ್ ಮೇವು ಲಭ್ಯವಿದೆ.