ಕೃಷಿ ಹೊಂಡಕ್ಕೆ ಇಬ್ಬರು ಬಲಿ, ಮೂವರು ಪಾರು, ಸೀರೆ ಕೊಟ್ಟು ರಕ್ಷಿಸಿದ ಮಹಿಳೆ

1212
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಅಂಕಾಲಮಡಗುವಿನಲ್ಲಿನ ಕೃಷಿ ಹೊಂಡದ ನೀರಿನಲ್ಲಿ ಮುಳುಗುತ್ತಿದ್ದ ಮನೆಯ ಹುಡುಗನನ್ನು ರಕ್ಷಿಸಲು ಹೋಗಿ ತಂದೆ ಮತ್ತು ಮಗ ಸೇರಿದಂತೆ ಇಬ್ಬರು ಮೃತಪಟ್ಟಿದ್ದು ಇದೇ ವೇಳೆ ಮಹಿಳೆಯೊಬ್ಬರು ಸೀರೆಯ ಮೂಲಕ ನೀರಿನಿಂದ ಇತರೆ ಮೂವರನ್ನು ಎಳೆದುಕೊಂಡು, ಪ್ರಾಣವನ್ನು ಉಳಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗ್ರಾಮದ ವೆಂಕಟರಾಯಪ್ಪ (72) ಮತ್ತು ಚೌಡರೆಡ್ಡಿ (50) ಮೃತರು. ಮಹಿಳೆಯ ಸಮಯ ಪ್ರಜ್ಞೆಯಿಂದ ಸಂಜಯ್ (14), ಪಾತಪಾಳ್ಯ ಪೆದ್ದಚೌಡರೆಡ್ಡಿ ಮತ್ತು ಸುದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಹಿನ್ನೆಲೆ

ತಂದೆ ಚೌಡರೆಡ್ಡಿ ಮತ್ತು ತಾತ ವೆಂಕಟರಾಯಪ್ಪರೊಂದಿಗೆ ಸಂಜಯ್ ತೋಟಕ್ಕೆ ಹೋಗಿದ್ದ. ಮಧ್ಯಾಹ್ನ ನೀರು ಕುಡಿಯಲು ಹೋಗಿ, ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಕೂಗಾಟವನ್ನು ಕೇಳಿಸಿಕೊಂಡು ಮೊದಲು ತಾತ, ಬಳಿಕ ತಂದೆ ರಕ್ಷಿಸಲು ಧುಮುಕಿದ್ದಾರೆ. ಬಾಲಕನೊಂದಿಗೆ ಮೇಲಕ್ಕೆ ಬರಲು ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಸಹಾಯಕ್ಕಾಗಿ ಮತ್ತೆ ಮೂವರು ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಪಕ್ಕದ ಜಮೀನಿನ ಪೆದ್ದಚೌಡರೆಡ್ಡಿ ಮತ್ತು ಸುದೀಪ್ ಹೊಂಡಕ್ಕೆ ಇಳಿದು, ಬಾಲಕನನ್ನು ಎಳೆದುಕೊಂಡು ರಕ್ಷಿಸಿದ್ದಾರೆ. ಆದರೆ, ಪಾಚಿಯ ನೀರಿನಲ್ಲಿ ಚೌಡರೆಡ್ಡಿ ಮತ್ತು ವೆಂಕಟರಾಯಪ್ಪ ಮುಳುಗಿ ಮೃತಪಟ್ಟಿದ್ದಾರೆ. ಅಸ್ವಸ್ಥ ಬಾಲಕನಿಗೆ ಚಿಂತಾಮಣಿ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಚೇತರಿಸಿಕೊಳ್ಳುತ್ತಿದ್ದಾನೆ.

ಘಟನೆಯ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲಿಸಿದರು. ಬಟ್ಲಹಳ್ಳಿಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಸೀರೆ ಕೊಟ್ಟು ರಕ್ಷಿಸಿದ ಮಹಿಳೆ

ಬಾಲಕನೊಂದಿಗೆ ಇಬ್ಬರು ಪಾಚಿ ನೀರಿನಲ್ಲಿ ಹರ ಸಾಹಸ ಮಾಡುತ್ತಿದ್ದನ್ನು ಕಂಡ ಗ್ರಾಮದ ಪ್ರಮೀಳಮ್ಮ ಉಟ್ಟ ಸೀರೆಯನ್ನು ಕೊಟ್ಟು ರಕ್ಷಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆ ವೇಳೆಗಾಗಲೇ ಚೌಡರೆಡ್ಡಿ ಮತ್ತು ವೆಂಕಟರಾಯಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಪೆದ್ದಚೌಡರೆಡ್ಡಿ ಮತ್ತು ಸುದೀಪ್ ಬಾಲಕನನ್ನು ಎಳೆದುಕೊಂಡು ಮೇಲಕ್ಕೆ ಬರಲು ಒದ್ದಾಡುತ್ತಿದ್ದರು. ಇದೇ ವೇಳೆ ಉಟ್ಟ ಸೀರೆಯನ್ನು ಬಿಚ್ಚಿ, ನೀರಿಗೆ ಹಾಕಿದ್ದಾಳೆ. ಇದನ್ನು ಹಿಡಿದುಕೊಂಡು ಮೂವರು ಹೊರಕ್ಕೆ ಬಂದಿದ್ದಾರೆ. ಇದರೊಂದಿಗೆ ಸಂಭವಿಸುತ್ತಿದ್ದ ಮತ್ತಷ್ಟು ಪ್ರಾಣ ಹಾನಿಯನ್ನು ತಪ್ಪಿಸಿ, ಪ್ರಮೀಳಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net