

ಹುಕ್ಕೇರಿ: ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರ ಗೊತ್ತಾಗದಂತೆ ಪ್ರಾರಂಭಿಸಿದ್ದು, ಇದು ಅನುಮಾನ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.
ಇಲ್ಲಿನ ಹಳೇ ತಹಸೀಲ್ದಾರ್ ಕಾರ್ಯಾಲಯದ ಬಳಿ ತಾಲೂಕಿನ ರೈತರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, 51 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಡಕಲ್ ಜಲಾಶಯದಲ್ಲಿ 4 ಟಿಎಂಸಿ ಹೂಳು ತುಂಬಿದೆ. 5 ಟಿಎಂಸಿ ಜಲಚರ, ಪಶು-ಪಕ್ಷಿಗಳಿಗೆ ನೀರು ಕಾಯ್ದಿರಿಸಿದೆ. 2 ಟಿಎಂಸಿ ನೀರು ಬಿಸಿಲಿಗೆ ಆವಿಯಾಗುತ್ತದೆ. ಇದನ್ನು ಗಮನಿಸಿದಾಗ 11 ಟಿಎಂಸಿ ನೀರು ಇಲ್ಲವಾಗುತ್ತದೆ ಎಂದರು.
ಉಳಿದ 40 ಟಿಎಂಸಿ ನೀರಿನಲ್ಲಿ ಬೆಳಗಾವಿ, ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳು ಹಾಗೂ ತಾಲೂಕಿನ ಶೇ.80 ಗ್ರಾಮಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಪೂರೈಸಲಾಗುತ್ತದೆ. ಗೋಕಾಕ, ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ, ನೆರೆಯ ಬಾಗಲಕೋಟೆ ಜಿಲ್ಲೆಯ ರೈತರ ಕೃಷಿಗಾಗಿ, ಕುಡಿಯಲು ಮತ್ತು ಈ ಭಾಗದಲ್ಲಿರುವ 50ಕ್ಕೂ ಅಧಿಕ ಕೈಗಾರಿಕೆಗಳಿಗೆ ನೀರು ಒದಗಿಸುತ್ತಿದೆ. ನೀರಿನ ಬಳಕೆ ಇಷ್ಟಿದ್ದರೂ ಸರ್ಕಾರ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಹರಿಸುವ ಯೋಜನೆ ಕೈಗೊಂಡಿರುವುದು ಖಂಡನೀಯ. ಕೂಡಲೇ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಮಾತನಾಡಿ, ಜಿಲ್ಲಾಧಿಕಾರಿ ಸೇರಿ ಪ್ರಮುಖ ಅಧಿಕಾರಿಗಳು ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಿಡಕಲ್ ಜಲಾಶಯದ ನೀರನ್ನೇ ನಂಬಿರುವ ಜನರು ಈ ಯೋಜನೆಯಿಂದಾಗಿ ಕುಡಿಯಲು ನೀರು ಸಿಗದೇ ಪರದಾಡುವ ಸ್ಥಿತಿ ಉಂಟಾಗುತ್ತದೆ ಎಂದರು.
ನಿಡಸೋಸಿಯ ದುರದುಂಡೇಶ್ವರ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಮತ್ತು ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ, ಹೋರಾಟ ಜತೆಗೆ ನ್ಯಾಯಾಂಗದ ಮೂಲಕ ಯೋಜನೆಯನ್ನು ತಡೆಯುವ ಪ್ರಯತ್ನ ಮಾಡಬೇಕು. ಅದಕ್ಕೆ ಸರ್ಕಾರ ಹಿಂದೆ ಸರಿಯದಿದ್ದಲ್ಲಿ ಜನಾಂದೋಲನದ ಮೂಲಕ ತಡೆ ಹಿಡಿಯಲು ಶ್ರಮಿಸುವಂತೆ ಸಲಹೆ ನೀಡಿದರು.
ಬಳಿಕ ತಹಸೀಲ್ದಾರ್ ಮಂಜುಳಾ ನಾಯಕ ಅವರಿಗೆ ಮನವಿ ಸಲ್ಲಿಸಿದರು. ಘೋಡಗೇರಿಯ ಕಾಶೀನಾಥ ಸ್ವಾಮೀಜಿ, ಶಿವಾಪುರದ ಕಾಡಸಿದ್ಧೇಶ್ವರ ಸ್ವಾಮೀಜಿ, ಪ್ರಭು ವಂಟಮೂರಿ, ಗೋಪಾಲ ಮರಬಸ್ಸನವರ, ಚಿದಾನಂದ ಡಬ್ಬು, ಎ.ಕೆ.ಪಾಟೀಲ, ಚಂದ್ರಶೇಖರ ಪಾಟೀಲ, ಭೀಮಣ್ಣ ರಾಮಗೋನಟ್ಟಿ, ಸುಭಾಷ ನಾಯಿಕ, ಸತ್ಯಗೌಡ ಪಾಟೀಲ, ಚಂದ್ರಶೇಖರ ಗಂಗನ್ನವರ, ತಮ್ಮಣಗೌಡ ಪಾಟೀಲ, ಕಬೀರ್ ಮಲೀಕ, ಚಂದ್ರು ಗಂಡ್ರೊಳ್ಳಿ, ಭೀಮಗೌಡ ಪಾಟೀಲ, ದುಂಡಗೌಡ ಪಾಟೀಲ, ಗಂಗಾಧರ ಪಾಟೀಲ, ಆನಂದ ಲಕ್ಕುಂಡಿ ಇತರರು ಇದ್ದರು.