ಎಳನೀರು ವ್ಯಾಪಾರಿ ಕೊಲೆ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

judgment (1)
Published on

ಮೈಸೂರು: ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳಿಗೆ ನಗರದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಎಚ್.ಡಿ.ಕೋಟೆ ತಾಲೂಕಿನ ಷರೀಫ್ ಕಾಲನಿಯ ನಾಗರಾಜು ಹತ್ಯೆಯಾಗಿದ್ದ ವ್ಯಕ್ತಿ. ಇದೇ ಊರಿನ ರಮೇಶ್ ಮತ್ತು ಬೆಂಗಳೂರಿನ ನಾಗೇನಹಳ್ಳಿಯ ಮುನಿಯಪ್ಪ ಬಡಾವಣೆಯ ರಮೇಶ್ ಶಿಕ್ಷೆಗೆ ಗುರಿಯಾದವರು.


ನಾಗರಾಜ ಎಳನೀರು ವ್ಯಾಪಾರ ಮಾಡುತ್ತಿದ್ದ. ಈತನ ದೊಡ್ಡಮ್ಮನ ಮಗನಾದ ಆರೋಪಿ ಪ್ರಕಾಶ್, ತನ್ನ ಹೆಂಡತಿಯೊಂದಿಗೆ ಜಗಳವಾಡಿ ದೂರವಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆಕೆ ನಾಗರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದನ್ನು ತಿಳಿದ ಪ್ರಕಾಶ್, 2ನೇ ಆರೋಪಿ ರಮೇಶ್‌ನನ್ನು ಬೆಂಗಳೂರಿನಿಂದ ಕರೆಸಿಕೊಂಡು ಕೊಲೆ ಮಾಡಲು 1 ಲಕ್ಷ ರೂ. ಪೈಕಿ 10 ಸಾವಿರ ರೂ. ಮುಂಗಡವಾಗಿ ಹಣ ಕೊಟ್ಟಿದ್ದ.


2021ರ ಅಕ್ಟೋಬರ್ 30ರಂದು ರಾತ್ರಿ 8.30ರಲ್ಲಿ ಕೆಲಸ ಮುಗಿಸಿಕೊಂಡು ನಾಗರಾಜ ಬೈಕ್‌ನಲ್ಲಿ ತೆರಳುತ್ತಿದ್ದ. ಇವನನ್ನು ಅಡ್ಡಗಟ್ಟಿ ಮುಖಕ್ಕೆ ಖಾರದ ಪುಡಿ ಎರಚಿ ದೊಣ್ಣೆ, ಕಬ್ಬಿಣದ ಕಾಡಿನಿಂದ ಹಲ್ಲೆ ಮಾಡಿ ಇಬ್ಬರು ಸೇರಿ ಕೊಲೆ ಮಾಡಿದ್ದರು.


ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ನಿರೀಕ್ಷಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಧೀಶೆ ಕೆ.ಭಾಗ್ಯ ವಿಚಾರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಆರೋಪಿಗಳು ಕೊಲೆ ಮಾಡಿ ಅಪರಾಧ ಎಸಗಿರುವುದು ರುಜುವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ್ದು, ತಪ್ಪಿದ್ದಲ್ಲಿ 1 ವರ್ಷ ಕಠಿಣ ಸಜೆ ವಿಧಿಸಲಾಗಿದೆ. ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕಿ ಟಿ.ಎಚ್.ಲೋಕಾಕ್ಷಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net