ನೀರಿನ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು

16 mlv 1
Published on

ಮಳವಳ್ಳಿ : ನೀರಿನ ಮಹತ್ವ ಅರಿತುಕೊಂಡರೆ ಪೋಲು ಮಾಡುವ ಮುನ್ನ ಎಚ್ಚರ ಮೂಡುತ್ತದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ನಿತೇಶ್ ಹೇಳಿದರು. ಪಟ್ಟಣದ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಇಲಾಖೆ ಶನಿವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಿವಿನ ಕೊರತೆಯಿಂದ ಹಲವರು ನೀರನ್ನು ಪೋಲು ಮಾಡುತ್ತಿರುವ ಕಾರಣ, ಹನಿ ನೀರಿಗೂ ಹಣ ನೀಡುವ ಸ್ಥಿತಿ ಬಂದಿದೆ. ಕೆರೆ, ಕಟ್ಟೆಗಳನ್ನು ನಾಶ ಮಾಡಿದ ಕಾರಣ ಅಂತರ್ಜಲ ಮಟ್ಟ ಪಾತಾಳಕ್ಕೆ ಸೇರುತ್ತಿದೆ.

ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ವಿನಾಶದ ಅಂಚಿಗೆ ತಲುಪಲಿದೆ ಎಂದರು. ಮನುಷ್ಯನ ದುರಾಸೆಯಿಂದ ಅರಣ್ಯ ವ್ಯಾಪ್ತಿ ಕಿರಿದಾಗುತ್ತಿದೆ. ಇಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಕೊರತೆ ಇದೆ. ಜಲಕ್ಷಾಮ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲಿ ಜಾಗೃತಿ ಅಗತ್ಯ ಎಂದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಹಾಗಾಗಿ ಯುವಜನರು ಭವಿಷ್ಯದ ನೆಮ್ಮದಿಯ ಜೀವನಕ್ಕಾಗಿ ಇಂದೇ ಎಚ್ಚೆತ್ತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಸಸಿ ನೆಟ್ಟು ಪಾಲನೆ ಮಾಡುವ ಮೂಲಕ ಪರಿಸರ ಸಂರಕ್ಷಣೆ, ನೀರಿನ ಸದ್ಬಳಕೆ ವಿಷಯದಲ್ಲಿ ಜಾಗೃತರಾಗಬೇಕು. ಆಗ ಮಾತ್ರ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ನಿತೇಶ್ ಹೇಳಿದರು. ವಿದ್ಯಾರ್ಥಿಗಳಿಗೆ ವಿಶ್ವ ಜಲ ದಿನದ ಇತಿಹಾಸ, ಮಹತ್ವ, ಘೋಷ ವಾಕ್ಯ ಮತ್ತು ಆರೋಗ್ಯ ಶಿಕ್ಷಣದ ಬಗ್ಗೆ ಅವರು ವಿವರವಾಗಿ ಮಾತನಾಡಿದರು.

ಬಹುಮಾನ ವಿತರಣೆ: ನೀರಿನ ಮಹತ್ವ ಹಾಗೂ ಸದ್ಬಳಕೆ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ನಗದು ಬಹುಮಾನ ನೀಡಿ ಗೌರವಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಶಂಕರ್, ಕಾಲೇಜು ಪ್ರಾಂಶುಪಾಲ ಚಂದ್ರ ಮೋಹನ್, ಉಪ ಪ್ರಾಂಶುಪಾಲೆ ಪದ್ಮಿನಿ, ಹಿರಿಯ ಉಪನ್ಯಾಸಕರಾದ ರಂಜಿತಾ, ಸುಚಿತ್ರಾ, ಪೂರ್ಣಿಮಾ, ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net