

ಬೇತಮಂಗಲ: ಕೆಜಿಎಫ್ ತಾಲೂಕು ಬೇತಮಂಗಲ ಹೋಬಳಿ ಕ್ಯಾಸಂಬಳ್ಳಿ ಸಮೀಪದ ಗ್ರಾಪಂ ವ್ಯಾಪ್ತಿಯ ಪೋತರಾಜನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ 6 ತಿಂಗಳಿಂದ ಹಾಹಾಕಾರ ಸೃಷ್ಟಿಯಾಗಿದೆ.
ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಸುಮಾರು ಆರು ತಿಂಗಳುಗಳು ಕಳೆದಿದ್ದು, ಸರಿಪಡಿಸುವಂತ ಹಲವು ಭಾರಿ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚಿ ಕುಳಿತಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಹೋಬಳಿ ಕೇಂದ್ರಗಳಾದ ಕ್ಯಾಸಂಬಳ್ಳಿ ಮತ್ತು ಬೇತಮಂಗಲ ಗ್ರಾಮದಿಂದ ಕೇವಲ 4ಕಿಮೀ ದೂರದಲ್ಲಿದೆ, ಗ್ರಾಮದಲ್ಲಿ ಒಟ್ಟು ಒಂದು ಸಾವಿರ ಜನಸಂಖ್ಯೆ ಇದ್ದು, ಸುಮಾರು 400 ಕುಟುಂಬಗಳಿವೆ. ಇದರಲ್ಲಿ ಎಲ್ಲ ಕುಟುಂಬಗಳು ನಿತ್ಯ ಕೂಲಿಗೆ ಹೋಗುವವರೇ ಆಗಿದ್ದಾರೆ, ಕೇವಲ ಕೂಲಿನಾಲಿ ಮಾಡಿ ಜೀವನ ಮಾಡುತ್ತಿರುವ ಪೋತರಜನಹಳ್ಳಿ ಜನರಿಗೆ ಕಳೆದ 6ತಿಂಗಳಿಂದ ಕುಡಿಯುವ ನೀರಿನದ್ದೇ ಸಮಸ್ಯೆಯಾಗಿದೆ.
ಕಳೆದ 5 ವರ್ಷದ ಹಿಂದೆ ಕ್ಷೇತ್ರದ ಶಾಸಕಿ ರೂಪಕಲಾ ಅವರು ಆರ್ಒ ಪ್ಲಾಂಟ್ ಸ್ಥಾಪನೆ ಮಾಡಿದ್ದರು.ಅಂದಿನಿಂದ ಗ್ರಾಮದಲ್ಲಿ ನೀರಿನ ಸಮಸ್ಯೆಯೇ ಇಲ್ಲದಂತಾಗಿತ್ತು, ಆದರೆ ಕಳೆದ ಒಂದು ವರ್ಷದಿಂದ ಸಮಸ್ಯೆ ಪ್ರಾರಂಭವಾಗಿದ್ದು, ಶುದ್ಧ ಕುಡಿಯುವ ನೀರು ಕೆಟ್ಟ ವಾಸನೆ ಮತ್ತು ಶುದ್ಧೀಕರಣ ಇಲ್ಲದೇ ನೀರು ಬರುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಶಾಸಕರು, ಪಂಚಾಯಿತಿ ಅಧಿಕಾರಿಗಳು ಮತ್ತು ಘಟಕದ ಉಸ್ತುವಾರಿ ಮತ್ತು ನಿರ್ವಹಣೆ ಮಾಡಬೇಕಾದ ಗ್ರಾಮೀಣ ನೀರು ಸರಬರಾಜು ಇಲ್ಲಿಯೇ ಅಧಿಕಾರಿಗಳಿಗೆ ನೂರೊಂದು ಬಾರಿ ಕೇಳಿಕೊಂಡರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೇಸಿಗೆ ಆರಂಭವಾಗಿದ್ದು ನೀರು ಇಲ್ಲದೆ ಕಷ್ಟ ಅನುಭವಿಸುವಂತಾಗಿದೆ. ಬೆಳಗ್ಗೆಯೇ ಕೂಲಿಗೆ ಹೋಗಬೇಕಾದವರು ಸುಮಾರು 2ಕಿ.ಮೀ. ದೂರದ ಬ್ಯಾಟ್ರಯನಹಳ್ಳಿ, ಅಥವಾ 3ಕಿ.ಮೀ. ದೂರದ ಬೇತಮಂಗಲ ಪಟ್ಟಣಕ್ಕೆ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ತಕ್ಷಣ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
6ತಿಂಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಪಂಚಾಯಿತಿಯವರನ್ನು ಕೇಳಿದರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಅದನ್ನೆಲ್ಲಾ ರಿಪೇರಿ ಮಾಡಲು ಆಗೋದಿಲ್ಲ ನೀವೆ ದುರಸ್ತಿ ಮಾಡಿಕೊಂಡೇ ಅದರಲ್ಲಿ ಬರುವ ಹಣವನ್ನು ನೀವೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಶಾಸಕಿ ರೂಪಕಲಾ ಸೇರಿ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮುಂದೆ ನಿಂತು ಸುಮಾರು 20ಸಾವಿರ ರೂ. ಖರ್ಚು ಮಾಡಿ ಕೆಲವು ಯಂತ್ರಗಳನ್ನು ರಿಪೇರಿ ಮಾಡಿಸಿದ್ದೇನೆ. ಆದರೆ ಪ್ರಮುಖ ಯಂತ್ರೋಪಕರಣ ಬದಲಾಯಿಸಿದರೆ ಮಾತ್ರ ಚಾಲನೆ ಮಾಡಲು ಸಾಧ್ಯವಾಗುತ್ತದೆ.
- ಅಪ್ಪಯ್ಯ ಗ್ರಾಪಂ ಸದಸ್ಯ
ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿ 5 ವರ್ಷ ಆಗಿದೆ. ಅನೇಕ ಗ್ರಾಮಗಳಲ್ಲಿ ಸಮಸ್ಯೆ ಇದ್ದು, ಗ್ರಾಮಸ್ಥರು ಸಹ ಅನೇಕ ಸಲ ನಮಗೆ ಮಾಹಿತಿ ನೀಡಿದ್ದಾರೆ. ಇಲಾಖೆಯಲ್ಲೂ ಸಮಸ್ಯೆ ಇದೆ, ಆದ್ದರಿಂದ ಸರಿಪಡಿಸಲು ಆಗಿಲ್ಲ. ಈ ಬಗ್ಗೆ ಎರಡು ಮೂರು ದಿನಗಳಲ್ಲಿ ರಿಪೇರಿ ಮಾಡಿ ನೀರನ್ನು ಕೊಡುವ ಕೆಲಸ ಮಾಡುತ್ತೇವೆ.
-ಸೂರ್ಯ ಪ್ರಕಾಶ್, ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಇಲಾಖೆ, ಬಂಗಾರಪೇಟೆ
ಸಾಕಷ್ಟು ಜನರಿಗೆ ಅನಾರೋಗ್ಯ
ಕಳೆದ 6 ತಿಂಗಳ ಹಿಂದಿನವರೆಗೂ ಅದೇ ನೀರನ್ನು ವಿಧಿಯಿಲ್ಲದೆ ಕುಡಿಯುತ್ತಿದ್ದರು. ಇದರಿಂದಾಗಿ ಸಾಕಷ್ಟು ಜನರು ಅನಾರೋಗ್ಯಕ್ಕೆ ತುತ್ತಾಗಿ ಕೆಲವರು ಮೃತಪಟ್ಟಿದ್ದಾರೆ. ಆದರೂ ಅದನ್ನೇ ಹಿಡಿದುಕೊಂಡು ಹೋಗಿ ಮನೆಯಲ್ಲಿ ಶುದ್ಧೀಕರಿಸಿ ಕುಡಿಯುತ್ತಿದ್ದರು, ಆದರೆ ಇದೀಗ ಕಳೆದ ಆರು ತಿಂಗಳಿಂದ ನೀರಿನ ಘಟಕ ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರಿಗೆ ವಿಪರೀತವಾಗಿ ನೀರಿನ ಸಮಸ್ಯೆ ಎದುರಾಗಿದೆ.