ಸಿಎಂ ತವರು ಜಿಲ್ಲೆಯಲ್ಲಿ ಜಲಸಂಕಟ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಜಲ ಸಂಕಟ ಉಲ್ಬಣಿಸುತ್ತಿದೆ. ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗಲಾಗಿದ್ದು, ಸದ್ಯಕ್ಕೆ ಅವುಗಳ ಮೂಲಕ 9 ಹಳ್ಳಿಗಳಿಗೆ ನೀರಿನ ದಾಹ ತೀರಿಸಲಾಗುತ್ತಿದೆ.


ಕೆಂಡದಂತಹ ಉರಿಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ನೀರಿನ ತತ್ವಾರ ಕಾಣಿಸಿಕೊಳ್ಳಲು ಶುರು ಮಾಡಿದೆ. ನೀರಿನ ಸಮಸ್ಯೆ ಗ್ರಾಮಾಂತರ ಪ್ರದೇಶದ ಜನರನ್ನು ಹೈರಾಣ ಮಾಡಿದೆ. ಸದ್ಯದಲ್ಲಿ ಮಳೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಮೈಸೂರು ನಗರ, ಪಟ್ಟಣ ಪ್ರದೇಶಕ್ಕಿಂತ ಗ್ರಾಮಾಂತರ ಭಾಗದಲ್ಲೇ ನೀರಿಗೆ ಹಾಹಾಕಾರ ತೀವ್ರವಾಗುತ್ತ ಸಾಗಿದೆ. ಎಚ್.ಡಿ.ಕೋಟೆ, ಸಾಲಿಗ್ರಾಮ, ತಿ.ನರಸೀಪುರ, ಕೆ.ಆರ್.ನಗರ ತಾಲೂಕಿನ ಹಳ್ಳಿಗಾಡಿನಲ್ಲೇ ನೀರಿನ ಸಮಸ್ಯೆ ಅಧಿಕವಾಗಿದೆ. ಬುಡಕಟ್ಟು ಜನರು ವಾಸಿಸುವ ಹಾಡಿಗಳಿಗೂ ಈ ಸಮಸ್ಯೆ ಹೆಚ್ಚಾಗಿಯೇ ತಟ್ಟಿದೆ.

9 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು:

ಅಂತರ್ಜಲವೂ ಬತ್ತಿದೆ. ಗ್ರಾಮ ಪಂಚಾಯಿತಿ ಅಧೀನದ ಬೋರ್‌ವೆಲ್‌ಗಳೂ ಬರಿದಾಗಿವೆ. ಹೀಗಾಗಿ, ಜನರಿಗೆ ನೀರು ಕೊಡಲು ಆಗುತ್ತಿಲ್ಲ. ಇದರಿಂದ ಖಾಸಗಿ ಕೊಳವೆಬಾವಿಗಳು ನೆರವು ಪಡೆದುಕೊಳ್ಳಲಾಗುತ್ತಿದೆ. ಈಗಾಗಲೇ 9 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಅವುಗಳ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಲಾಗಿದೆ.

ಎಚ್.ಡಿ.ಕೋಟೆ ತಾಲೂಕಿನ ಸೋನಹಳ್ಳಿ ಹಾಡಿಗೆ 2023ರ ಅಕ್ಟೋಬರ್‌ನಿಂದಲೂ ಖಾಸಗಿ ಕೊಳವೆಬಾವಿ ಮೂಲಕ ಬುಡಕಟ್ಟು ಜನರಿಗೆ ನೀರು ಕೊಡಲಾಗುತ್ತಿದೆ. ಅಲ್ಲದೆ, ಕೆ.ಆರ್.ನಗರ ತಾಲೂಕಿನ ಬೈದರಹಳ್ಳಿ ಗ್ರಾಮಾಕ್ಕೆ ಮಾ.11ರಿಂದ ನೀರು ಕೊಡಲಾಗುತ್ತಿದೆ. ಏಪ್ರಿಲ್‌ನಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಕೊಡುವ ಗ್ರಾಮಗಳ ಸಂಖ್ಯೆ ಹೆಚ್ಚಾಗಿದೆ.


ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ, ನೇರಳೆ, ತಿ.ನರಸೀಪುರ ತಾಲೂಕಿನ ಸೋಮನಾಥಪುರ, ಕುಕ್ಕುರು, ಹುಣಸೂರು ತಾಲೂಕಿನ ಹೊಸರಾಮೇನಹಳ್ಳಿ, ಸಾಲಿಗ್ರಾಮ ತಾಲೂಕಿನ ಕೊಡಿಯಾಳ, ಜಯನಗರ ಗ್ರಾಮದಲ್ಲಿ ಖಾಸಗಿ ವ್ಯವಸ್ಥೆ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರೊಂದಿಗೆ ಈ ಭಾಗದ ಜನರ ನೀರಡಿಕೆಯನ್ನು ನೀಗಿಸಲಾಗುತ್ತಿದೆ. ಖಾಸಗಿ ಕೊಳವೆಬಾವಿಯಿಂದ ನೀರು ಪಡೆದುಕೊಳ್ಳುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಅವುಗಳ ಮಾಲೀಕರಿಗೆ ಇಂತಿಷ್ಟು ಹಣವನ್ನು ತಾಲೂಕು ಆಡಳಿತದಿಂದ ಸಂದಾಯ ಮಾಡಲಾಗುತ್ತಿದೆ.


ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ:


ಏಪ್ರಿಲ್‌ನಿಂದ ಮುಂದಿನ ಮೇ ಮತ್ತು ಜೂನ್ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಲಕ್ಷಣಗಳು ಈಗಾಗಲೇ ಗೋಚರವಾಗುತ್ತಿವೆ. ಅದಕ್ಕಾಗಿ ಜಿಲ್ಲಾದ್ಯಂತ 80 ಗ್ರಾಮಗಳಲ್ಲಿರುವ ಖಾಸಗಿ ಕೊಳವೆ ಬಾವಿಗಳನ್ನೂ ಈಗಾಗಲೇ ಗುರುತಿಸಲಾಗಿದ್ದು, ನೀರಿನ ಹಾಹಾಕಾರ ಉಂಟಾಗುತ್ತಿದ್ದಂತೆ ಆಯಾ ಗ್ರಾಮದಲ್ಲಿ ಇವುಗಳ ಮೂಲಕ ನೀರು ಪೂರೈಕೆ ಮಾಡಲು ಸಜ್ಜುಗೊಳಿಸಲಾಗಿದೆ.

ಮೈಸೂರು ತಾಲೂಕಿನಲ್ಲಿ 2, ಎಚ್.ಡಿ.ಕೋಟೆ ತಾಲೂಕಿನಲ್ಲಿ 22, ಸರಗೂರು ತಾಲೂಕಿನಲ್ಲಿ 8, ಹುಣಸೂರು ತಾಲೂಕಿನಲ್ಲಿ 1, ನಂಜನಗೂಡು ತಾಲೂಕಿನಲ್ಲಿ 5, ಪಿರಿಯಾಪಟ್ಟಣ ತಾಲೂಕಿನಲ್ಲಿ 4, ಕೆ.ಆರ್.ನಗರ ತಾಲೂಕಿನಲ್ಲಿ 11, ಸಾಲಿಗ್ರಾಮ ತಾಲೂಕಿನಲ್ಲಿ 15, ತಿ.ನರಸೀಪುರ ತಾಲೂಕಿನಲ್ಲಿ 9 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಯಾಯ ಗ್ರಾಮ ಪಂಚಾಯಿತಿಗಳು ಮುಂದಾಗಿವೆ.

ಕೆಲ ಹಳ್ಳಿಗಳಿಗೆ ಹಬ್ಬಗಳ ಸಂದರ್ಭದಲ್ಲಿ ಟ್ಯಾಂಕರ್ ನೀರು ಕೊಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಂಜಿತ್‌ಕುಮಾರ್ ತಿಳಿಸಿದ್ದಾರೆ.


106 ಗ್ರಾಮಗಳಿಗೆ ನೀರಿನ ಸಮಸ್ಯೆ:


ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಮಸ್ಯಾತ್ಮಕ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಜಿಲ್ಲೆಯಲ್ಲಿ 106 ಗ್ರಾಮಗಳು ನೀರಿನ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿವೆ. ಈ ಪೈಕಿ ಮೈಸೂರು ತಾಲೂಕಿನಲ್ಲಿ 8, ಎಚ್.ಡಿ.ಕೋಟೆ ತಾಲೂಕಿನಲ್ಲಿ 25, ಸರಗೂರು ತಾಲೂಕಿನಲ್ಲಿ 11, ಹುಣಸೂರು ತಾಲೂಕಿನಲ್ಲಿ 3, ನಂಜನಗೂಡು ತಾಲೂಕಿನಲ್ಲಿ 5, ಪಿರಿಯಾಪಟ್ಟಣ ತಾಲೂಕಿನಲ್ಲಿ 8, ಕೆ.ಆರ್.ನಗರ ತಾಲೂಕಿನಲ್ಲಿ 12, ಸಾಲಿಗ್ರಾಮ ತಾಲೂಕಿನಲ್ಲಿ 19, ತಿ.ನರಸೀಪುರ ತಾಲೂಕಿನಲ್ಲಿ 15 ಗ್ರಾಮಗಳು ನೀರಿನ ಜಲ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.


ಪಿರಿಯಾಪಟ್ಟಣ ಪಟ್ಟಣದಲ್ಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಅಲ್ಲಿಯ 9 ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರ ಪ್ರದೇಶದಲ್ಲೂ ನೀರಿನ ಹಾಹಾಕಾರ ಉಂಟಾಗುವುದು ನಿಶ್ಚಿತ.


ಬರ ಪರಿಸ್ಥಿತಿ ತೀವ್ರತೆಯಿಂದ ಕೆರೆಕಟ್ಟೆಗಳೂ ಬತ್ತಿವೆ. ಜಲಚರ, ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾಗಿದೆ. ಇವುಗಳಿಗೆ ಪಯಾರ್ಯ ವ್ಯವಸ್ಥೆ ಕಲ್ಪಿಸಲು ಆಗುತ್ತಿಲ್ಲ. ನೀರಿನ ಬವಣೆಯಿಂದ ಇವುಗಳು ತತ್ತರಿಸಿವೆ.
ಮೇವಿಗೂ ಕೊರತೆ:

ಜಿಲ್ಲೆಯಲ್ಲಿ ಮೇವು ಕೊರತೆ ಸಹ ಉಂಟಾಗಿದೆ. ಕೆಲ ಕಡೆ ಜಾನುವಾರುಗಳಿಗೆ ಮೇವು ದೊರೆಯುತ್ತಿಲ್ಲ. ಗಡಿ ಭಾಗಗಳಲ್ಲಿ ಮೇವು ಹೊರರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ, ಪಶುಸಂಗೋಪನೆ ಇಲಾಖೆಯ ಪ್ರಕಾರ 34 ವಾರಗಳಿಗಾಗುವಷ್ಟು ಮೇವು ಲಭ್ಯ ಇದೆ ಎಂದು ತಿಳಿಸಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. 9 ಹಳ್ಳಿಗಳಲ್ಲಿ ನೀರಿನ ತೊಂದರೆ ಉಂಟಾಗಿದೆ. ಖಾಸಗಿ ಬೋರ್‌ವೆಲ್ ಮೂಲಕ ನೀರು ಕೊಡಲಾಗುತ್ತಿದೆ. ಆದರೆ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಷ್ಟು ಸಮಸ್ಯೆ ಹೋಗಿಲ್ಲ. ಆದರೆ, ಸಮಸ್ಯೆ ಉಂಟಾಗಿರುವ ಗ್ರಾಮಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ರಂಜಿತ್‌ಕುಮಾರ್, ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net