

ಬೆಂಗಳೂರು ಗ್ರಾಮಾಂತರ: ಕಳೆದೆರಡು ವರ್ಷದಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಸಂತಸದ ವಿಷಯವಾದರೂ ನದಿ ಮೂಲವಿಲ್ಲದ ಜಿಲ್ಲೆಯಲ್ಲಿ ಬರಗಾಲವೆಂಬ ಭೀಕರತೆ ಯಾವಾಗ ಎದುರಾಗುತ್ತದೋ ಎಂಬ ಆತಂಕ ಇದ್ದೇ ಇದೆ.
ಈ ಹಿನ್ನೆಲೆಯಲ್ಲಿ ಮಳೆಯಾಧಾರಿತ ಕೃಷಿಯನ್ನೇ ನಂಬಿರುವ ರೈತರು ಜಲಮೂಲ ರಕ್ಷಣೆಗೆ ಒತ್ತು ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ತೋಟಗಾರಿಕೆ ಇಲಾಖೆಯೂ ಬೃಹತ್ ನೀರಿನ ಸಂರಕ್ಷಣಾ ಘಟಕಗಳ ನಿರ್ಮಾಣದ ಮೂಲಕ ರೈತರ ನೆರವಿಗೆ ಮುಂದಾಗಿದೆ.
ಹೌದು! ಜಿಲ್ಲೆಯ ತೋಟಗಾರಿಕೆ ಇಲಾಖೆ ಈಗ ಕೃಷಿ ಹೊಂಡ ಮಾದರಿಯಲ್ಲೇ ಬೃಹತ್ ನೀರಿನ ಸಂರಕ್ಷಣಾ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಮಳೆಯಾಧಾರಿತ ಕೃಷಿಕರಿಗೆ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ. ಬೃಹತ್ ನೀರಿನ ಸಂರಕ್ಷಣಾ ಘಟಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿ ಸಹಾಯಧನ ವಿತರಿಸಲು ಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ತೋಟಗಾರಿಕೆ ರೈತರಿಗೆ ವರದಾನ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯ ಬಹಳಷ್ಟು ತೋಟಗಾರಿಕೆ ಬೆಳೆಗಾರರು ನಷ್ಟ ಅನುಭವಿಸಿದ್ದರು. ನೀರಿನ ಬವಣೆಯೊಂದಿಗೆ ಬೆಳೆದ ತರಕಾರಿ ಸಮರ್ಪಕವಾಗಿ ಮಾರಾಟವಾಗದೆ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಈ ವೇಳೆ ಬೆಳೆಗಾರರ ನೆರವಿಗೆ ನಿಂತಿದ್ದ ತೋಟಗಾರಿಕೆ ಇಲಾಖೆ ಈ ಬಾರಿ ವಿನೂತನ ಯೋಜನೆಯೊಂದಿಗೆ ಬೆನ್ನೆಲುಬಾಗಿ ನಿಲ್ಲಲು ಮುಂದಾಗಿದೆ.
ಬೆಳೆ ರಕ್ಷಣೆ ಉದ್ದೇಶ: ತೋಟಗಾರಿಕೆ ಇಲಾಖೆಯಿಂದ 2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಕಾರ್ಯಕ್ರಮ ಅನುಷ್ಠಾಗೊಳ್ಳುತ್ತಿದೆ. ವೈಯಕ್ತಿಕ, ಸಮುದಾಯ ನೀರು ಸಂಗ್ರಹಣಾ ಘಟಕ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಹಾಯಧನ ನೀಡಲು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಬರಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ನೀರಾವರಿ ಒದಗಿಸುವುದು ಹಾಗೂ ತೋಟಗಾರಿಕೆ ಬೆಳೆ ಒಣಗುವ ಸಮಯದಲ್ಲಿ ನಿರ್ಣಾಯಕ ಹಂತದ ನೀರುಣಿಸುವಿಕೆಯಿಂದ ಬೆಳೆ ರಕ್ಷಿಸುವ ಅವಶ್ಯಕತೆ ಹಿನ್ನೆಲೆಯಲ್ಲಿ ನೀರು ಸಂಗ್ರಹಣಾ ಘಟಕ ನಿರ್ಮಿಸಿಕೊಂಡು ಮಳೆನೀರನ್ನು ಸಂಗ್ರಹಿಸುವುದು ಈ ಯೋಜನೆ ಪ್ರಮುಖ ಉದ್ದೇಶವಾಗಿದೆ.
ಎರಡು ಬಗೆಯ ಸಹಾಯಧನ: ನೆಲಮಟ್ಟಕ್ಕಿಂತ ಕೆಳಗಿನ ಘಟಕದಲ್ಲಿ 4 ಸಾವಿರ ಕ್ಯುಬಿಕ್ ಮೀಟರ್ ಘಟಕ ನಿರ್ಮಾಣಕ್ಕೆ ತಗಲುವ 6 ಲಕ್ಷ ರೂ. ವೆಚ್ಚಕ್ಕೆ 3 ಲಕ್ಷ ರೂ. ಸಹಾಯಧನ, 6 ಸಾವಿರ ಕ್ಯುಬಿಕ್ ಮೀಟರ್ ಘಟಕಕ್ಕೆ 8 ಲಕ್ಷ ರೂ. ವೆಚ್ಚಕ್ಕೆ 4 ಲಕ್ಷ ರೂ. ಸಹಾಯಧನ, 8 ಸಾವಿರ ಕ್ಯುಬಿಕ್ ಮೀಟರ್ ಘಟಕಕ್ಕೆ 10 ಲಕ್ಷ ರೂ. ನಿರ್ಮಾಣ ವೆಚ್ಚಕ್ಕೆ 5 ಲಕ್ಷ ರೂ. ಸಹಾಯಧನ ದೊರೆಯಲಿದೆ. ನೆಲಮಟ್ಟಕ್ಕಿಂತ ಮೇಲಿನ ಘಟಕದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯ ಘಟಕಕ್ಕೆ 3.25 ಲಕ್ಷ ರೂ. ಸಹಾಯಧನ, 20 ಲಕ್ಷ ಲೀಟರ್ ಸಾಮರ್ಥ್ಯ ಘಟಕಕ್ಕೆ 5 ಲಕ್ಷ ರೂ., 50 ಲಕ್ಷ ಲೀಟರ್ ಸಾಮರ್ಥ್ಯದ ಘಟಕಕ್ಕೆ 7.50 ಲಕ್ಷ ರೂ.ಸಹಾಯಧನ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ನೆಲಮಟ್ಟಕ್ಕಿಂತ ಕೆಳಗೆ ರಚಿಸುವ ನೀರು ಸಂಗ್ರಹಣಾ ಘಟಕ ಮತ್ತು ನೆಲಮಟ್ಟಕ್ಕಿಂತ ಮೇಲೆ ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗನುಗುಣವಾಗಿ ಸಹಾಯಧನ ನೀಡಲಾಗುವುದು. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು. ಮಹಾಂತೇಶ್ ಮುರುಗೋಡು ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ