

ಮಂಡ್ಯ: ಹಲವು ವರ್ಷದ ಬೇಡಿಕೆಯಂತೆ ಮಂಡ್ಯ ನಗರದ ನೀರಿನ ದರವನ್ನು 282 ರೂನಿಂದ 225 ರೂಗೆ ಇಳಿಕೆ ಮಾಡಿರುವ ಆದೇಶ ಡಿಸೆಂಬರ್‌ನಿಂದಲೇ ಅನ್ವಯವಾಗಲಿದೆ. ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ದರ ಇಳಿಕೆಯಿಂದ ನಗರದ ಸುಮಾರು 20 ಸಾವಿರ ಕುಟುಂಬಕ್ಕೆ ಅನುಕೂಲವಾಗಲಿದೆ. ಮಾಸಿಕ 120 ರೂ ಇದ್ದ ನೀರಿನ ದರವನ್ನು 2011ರಲ್ಲಿ ಏಕಾಏಕಿ ದುಪ್ಪಟ್ಟು ಮಾಡಲಾಗಿತ್ತು. 2019ರಲ್ಲಿ 282 ರೂಗೆ ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ನಿರಂತರ ಹೋರಾಟ ಮಾಡಿದರೂ ದರ ಇಳಿಕೆ ಮಾಡಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗಿತ್ತು. ಬಳಿಕ ಡಿ.7ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ದರ ಇಳಿಕೆಯನ್ನು ಅಂತಿಮಗೊಳಿಸಲಾಗಿತ್ತು. ಅದರಂತೆ ಅಧಿಕೃತ ಆದೇಶ ನೀಡಲಾಗಿದೆ. ಇನ್ನು ಸಾರ್ವಜನಿಕರು ಜಲಮಂಡಳಿಗೆ ಪಾವತಿಸಬೇಕಿರುವ ದಂಡ ಹಾಗೂ ಬಡ್ಡಿ ಮನ್ನಾಕ್ಕೆ ಮಾಡಿಸುವುದರ ಜತೆಗೆ ಅಸಲು ಪಾವತಿಗೆ ರಿಯಾಯಿತಿ ನೀಡಿ ಒಂದೇ ಹಂತದ ಪಾವತಿಗೆ ಆದೇಶ ಹೊರಡಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ದರ ಇಳಿಕೆಗೆ ಸಹಕರಿಸಿದ ಸಿಎಂ, ಡಿಸಿಎಂ, ಸಚಿವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಇನ್ನು ಮಂಡ್ಯ ನಗರದ ಸಮಗ್ರ ಅಭಿವೃದ್ದಿ ದೃಷ್ಠಿಯಿಂದ ಹಲವು ಯೋಜನೆ ರೂಪಿಸಲಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯ-ಕೌಡ್ಲೆ ಮಾರ್ಗದ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 11 ಕೋಟಿ ರೂ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ. ಮಂಡ್ಯ ನಗರ ವ್ಯಾಪ್ತಿಯ ಬನ್ನೂರು ರಸ್ತೆಯನ್ನು ಕನ್ನಿಕಾ ಪರಮೇಶ್ವರಿ ದೇವಾಲಯ ಹಾಗೂ ಗೌರಿ ಶಂಕರ ಕಲ್ಯಾಣ ಮಂಟಪದವರೆಗೆ ಆಧುನಿಕ ರೀತಿಯಲ್ಲಿ ಅಭಿವೃದ್ದಿಪಡಿಸಲು 1.70 ಕೋಟಿ ರೂ ಅನುದಾನ ಮಂಜೂರಾಗಿದೆ. ಸಧ್ಯಕ್ಕೆ ಪ್ರಯಾಣಿಕರ ಹಿತದೃಷ್ಟಿಯಿಂದ ಗುಂಡಿ ಮುಚ್ಚಲು 16 ಲಕ್ಷ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ತಕ್ಷಣವೇ ಕಾರ್ಯಾರಂಭ ಮಾಡಲಾಗುವುದು ಎಂದು ವಿವರಿಸಿದರು.
ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಚರಂಡಿ ನಿರ್ಮಾಣಕ್ಕಾಗಿ 30 ಕೋಟಿ ರೂ, ವಿವಿಧ ಅಭಿವೃದ್ದಿಗಾಗಿ ನಗರದ 35 ವಾರ್ಡ್‌ಗೆ ತಲಾ 13 ಲಕ್ಷ ರೂ ಅನುದಾನ ಹಂಚಿಕೆಗೆ ಕ್ರಮ ವಹಿಸಲಾಗಿದೆ. ಬೀಡಿ ಕಾಲನಿ ಹಾಗೂ ಚಿಕ್ಕಮಂಡ್ಯ ನಿವಾಸಿಗಳಿಗೆ ಮಳೆ ಸಮಯದಲ್ಲಿ ಎದುರಾಗುತ್ತಿದ್ದ ಸಮಸ್ಯೆ ತಪ್ಪಿಸಲು 5 ಕೋಟಿ ರೂ ವೆಚ್ಚದಲ್ಲಿ ಶಾಶ್ವತ ರಕ್ಷಣಾ ಗೋಡೆ ನಿರ್ಮಾಣ, ನಗರದ ಗಾಂಧಿ ಉದ್ಯಾನದ ಅಭಿವೃದ್ದಿಗೂ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ನಗರದ ಸಮಗ್ರ ಅಭಿವೃದ್ದಿಗೆ ಹಂತ- ಹಂತವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಮಂಡ್ಯ ತಾಲೂಕು ಹೊಸ ಬೂದನೂರು ಗ್ರಾಮದಲ್ಲಿ ಅನಂತ ಪದ್ಮನಾಭ ಹಾಗೂ ಕಾಶಿವಿಶ್ವನಾಥ ದೇವಸ್ಥಾನಗಳಿವೆ. ಇವುಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ 2 ದಿನ ಕಾಲ ಬೂದನೂರು ಉತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು, ಅದರಂತೆ ಈ ವರ್ಷವೂ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕಾಗಿ 25 ಲಕ್ಷ ರೂ ಅನುದಾನಕ್ಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರುದ್ರಪ್ಪ, ನಗರಸಭಾ ಸದಸ್ಯರಾದ ಶ್ರೀಧರ್, ನಹೀಂ, ಶಿವಪ್ರಕಾಶ್, ಪೂರ್ಣಿಮಾ, ಜಾಕೀರ್, ಹಾಲಹಳ್ಳಿ ರವಿ ಇದ್ದರು.