

ಕೊಪ್ಪ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಾಗಿಲು ತೆಗೆದ ಕೊಡಲೇ ಒಳಗೆ ಬರುತ್ತಿದ್ದ ನಾಯಿಗಳನ್ನು ಓಡಿಸಿ ಸುಸ್ತಾಗಿದ್ದ ಪ್ರವಾಸಿ ಮಂದಿರದ ಸಿಬ್ಬಂದಿ ನಾಯಿಗಳನ್ನು ಓಡಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಬಾಳಗಡಿಯ ಪ್ರವಾಸಿ ಮಂದಿರದಲ್ಲಿ ನಾಯಿಗಳ ಕಾಟ ಹೆಚ್ಚಿತ್ತು. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗುತ್ತಿದ್ದವು. ಇದರಿಂದ ಪ್ರವಾಸಿ ಮಂದಿರಕ್ಕೆ ಬಂದ ಅತಿಥಿಗಳಿಗೂ ಕಿರಿಕಿರಿಯಾಗುತ್ತಿತ್ತು. ಇದನ್ನು ಕಂಡ ಸಿಬ್ಬಂದಿ ಪ್ರವಾಸಿ ಮಂದಿರದ ಮುಖ್ಯಬಾಗಿಲಿನ ಅಕ್ಕ ಪಕ್ಕದಲ್ಲಿ ನೀಲಿ ನೀರು ತುಂಬಿದ ಬಾಟಲಿಗಳನ್ನು ಇಟ್ಟು ನಾಯಿಯನ್ನು ಬೆದರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನೀಲಿ ನೀರನ್ನು ಕಂಡರೇ ಸಾಕು ನಾಯಿಗಳು ಕನಿಷ್ಠ ಹತ್ತು ಅಡಿಗಳ ಅಂತರ ಕಾಯ್ದುಕೊಳ್ಳುತ್ತವೆ.
ದಕ್ಷಿಣ ಕನ್ನಡ ಭಾಗದಲ್ಲಿ ನೀಲಿ ನೀರನ್ನು ಇಟ್ಟು ನಾಯಿ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ವಿಧಾನ ಗಮನಿಸಿದ್ದೆ. ನಮ್ಮಲ್ಲಿಯೂ ನಾಯಿಯ ಕಾಟ ಹೆಚ್ಚಾಗಿತ್ತು. ಇಲ್ಲೂ ಬಾಗಿಲಿನ ಎರಡೂ ಬದಿ ಬಾಟಲಿಯಲ್ಲಿ ನೀಲಿ ನೀರು ಇಡಲಾಗಿದೆ. ಈಗ ನಾಯಿಗಳು ಒಳಗೆ ಬರುವುದು ನಿಂತಿದೆ ಎನ್ನುತ್ತಾರೆ ಪ್ರವಾಸಿ ಮಂದಿರದ ಸಿಬ್ಬಂದಿ ಮನೋಹರ್.