

ಕಿಕ್ಕೇರಿ : ಮಳೆರಾಯನ ಆರ್ಭಟಕ್ಕೆ ಸಮೀಪದ ಚಿಕ್ಕಮಂದಗೆರೆ ಗ್ರಾಮ ಜಲದಿಗ್ಬಂಧನದಲ್ಲಿ ಸಿಲುಕಿದೆ.
ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಗ್ರಾಮಕ್ಕೆ ಸಂಚಾರ ಕಡಿತವಾಗಿದೆ. ಮಂದಗೆರೆಯಿಂದ ಸುಮಾರು 3 ಕಿ.ಮೀ. ಅಂತರದ ಗ್ರಾಮಕ್ಕೆ ಬೇವಿನಹಳ್ಳಿ ಬಳಿಯ ತಿರುವಿನಲ್ಲಿ ಸಾಗಬೇಕಿದೆ. ತಿರುವಿನಿಂದ 2 ಕಿ.ಮೀ. ಸಾಗಿದರೆ ಗ್ರಾಮ ಸಿಗಲಿದೆ. ಗ್ರಾಮದ ಬಳಿ ಹಾದುಹೋಗಿರುವ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಿಸಲಾಗಿದೆ. ರೈಲ್ವೆ ಸೇತುವೆ ಕೆಳಭಾಗದಲ್ಲಿ ನಿರ್ಮಿಸಿರುವ ರಸ್ತೆ ಅವೈಜ್ಞಾನಿಕವಾಗಿದೆ. ಸೇತುವೆ ಕೆಳಗಿನ(ಅಂಡರ್‌ಪಾಸ್)ರಸ್ತೆ ಕೆಳಮಟ್ಟದಲ್ಲಿರುವ ಕಾರಣ ಸ್ವಲ್ಪ ಮಳೆಯಾದರೂ ಸೇತುವೆ ಬಳಿ ನೀರು ನಿಲ್ಲಲಿದೆ.
ಮಳೆರಾಯನ ಆರ್ಭಟದಿಂದ ಸೇತುವೆ ಬಳಿ ಆಳುದ್ದ ನೀರು ನಿಂತು ಹೊರಗೆ ಹೋಗಲು ಸ್ಥಳವಿಲ್ಲದಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಪರಿಣಾಮ ಮೂರ‌್ನಾಲ್ಕು ದಿನಗಳಿಂದ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಮಂದಗೆರೆ ಮತ್ತಿತರ ಪ್ರದೇಶಕ್ಕೆ ತೆರಳಲು ಪರ್ಯಾಯವಾಗಿ 6-7 ಕಿ.ಮೀ. ಸುತ್ತಿಕೊಂಡು ಉದ್ದಿನಬೋರೆಕಾವಲು ಮಾರ್ಗವಾಗಿ ಸಾಗಬೇಕಿದೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ವಿದ್ಯಾರ್ಥಿಗಳು ಶಾಲೆಗೆ ಮಳೆಗಾಲದಲ್ಲಿ ಗೈರಾಗುವ ಸ್ಥಿತಿ ಕಾಡುತ್ತಿದೆ.
ರೈತಾಪಿ ಸಮುದಾಯವಿರುವ ಗ್ರಾಮದಲ್ಲಿ ಪಾಲಕರು ಕೃಷಿ ಚಟುವಟಿಕೆಗೆ ತೆರಳುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪರಿತಪಿಸುವಂತಾಗಿದೆ. ವಯೋವೃದ್ಧರು, ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಿದರೆ ದೇವರೆ ಗತಿ ಎನ್ನುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ರೈಲ್ವೆ ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ನಿಲ್ಲದಂತೆ ತ್ವರಿತವಾಗಿ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಮ್ಮೂರು ಕುಗ್ರಾಮವಾಗಿದ್ದು, ಸಾರಿಗೆ ಸೌಲಭ್ಯವಿಲ್ಲದ ಗ್ರಾಮವಾಗಿದೆ. ಗ್ರಾಮದಿಂದ ಹೊರಗೆ ಹೋಗಲು ಮೊದಲೇ ದೊಡ್ಡ ಸಮಸ್ಯೆ ಇದೆ. ಮಳೆಗಾಲದಲ್ಲಿ ತಪ್ಪದ ಸಮಸ್ಯೆಯಾಗಿದೆ. ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಒದಗಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಲು ಮುಂದಾಗಬೇಕಿದೆ.
ಗಂಗಾಧರ ಗ್ರಾಮಸ್ಥ
ಗ್ರಾಮದ ಸೇತುವೆ ಬಳಿ ನಿಲ್ಲುವ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಮಾಡಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು.
ಸುವರ್ಣ ಪಿಡಿಒ ಮಂದಗೆರೆ