

ನಂಜನಗೂಡು : ಶ್ರೀಕಂಠೇಶ್ವರನ ನೆಲೆವೀಡಾದ ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ಶುಕ್ರವಾರ ಕಪಿಲಾ ನದಿ ಪ್ರವಾಹದಿಂದ ಮೈಸೂರು-ನಂಜನಗೂಡು ಹೆದ್ದಾರಿ ಬಂದ್ ಆಗಿದೆ. ಇದರಿಂದ ತಮಿಳುನಾಡು, ಕೇರಳ ರಾಜ್ಯ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಪರದಾಡುವಂತಾಯಿತು.
ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ಸೇರಿದಂತೆ ನುಗು ಜಲಾಶಯದಿಂದ ಹೊರಹರಿವು ಹೆಚ್ಚಿರುವುದರಿಂದ ಕಪಿಲಾ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಮೈಸೂರು-ನಂಜನಗೂಡು ಮಾರ್ಗ ಶುಕ್ರವಾರ ಇಡೀ ದಿನ ಬಂದ್ ಆಗಿತ್ತು. ಇದರಿಂದ ನಂಜನಗೂಡನಿಂದ ಮೈಸೂರಿಗೆ ಹುಲ್ಲಹಳ್ಳಿ, ರಾಂಪುರ, ಉದ್ಬೂರು ಮಾರ್ಗವಾಗಿ ಮೈಸೂರಿಗೆ ಹಾಗೂ ಮೈಸೂರಿನಿಂದ ಕಡಕೊಳ, ತಾಂಡ್ಯ ಕೈಗಾರಿಕಾ ಪ್ರದೇಶ, ಕೆಂಪಿಸಿದ್ದನಹುಂಡಿ, ಹೆಜ್ಜಿಗೆ ಮಾರ್ಗವಾಗಿ ಏಕಮುಖ ಸಂಚಾರಕ್ಕೆ ಶುಕ್ರವಾರ ಅನುವು ಮಾಡಿಕೊಡಲಾಗಿತ್ತು. ಹೆಜ್ಜಿಗೆ ಸೇತುವೆ ಮುಂಭಾಗದಲ್ಲೂ ಪ್ರವಾಹವು ಚಾಚಿ ನಿಂತಿದ್ದರಿಂದ ಬೈಕ್ ಸವಾರರು ಸೇತುವೆ ದಾಟಲು ಹೆಣಗಾಡುವಂತಾಯಿತು.
ಶ್ರೀಕಂಠೇಶ್ವರನ ಸನ್ನಿಧಿಗೆ ಪ್ರವಾಹ
ನದಿಯ ಪ್ರವಾಹ ಬೈಪಾಸ್ ರಸ್ತೆಯನ್ನೂ ದಾಟಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆವರಣ ಪ್ರವೇಶಿಸಿದೆ. ಕಪಿಲೆ ಹಾಗೂ ಗುಂಡ್ಲು ನದಿಗೆ ನಗರದ ಬಹುತೇಕ ಬಡಾವಣೆಗಳ ಚರಂಡಿ ತ್ಯಾಜ್ಯ ನೀರು ಬಿಡಲು ಸಂಪರ್ಕ ಕಲ್ಪಿಸಿದ್ದ ಪೈಪ್‌ಲೈನ್‌ನಲ್ಲಿ ಪ್ರವಾಹ ನೀರು ಹಿಮ್ಮುಖವಾಗಿ ಹರಿದು ಭಕ್ತಿ ಮಾರ್ಗ, ಮೋಕ್ಷ ಮಾರ್ಗ, ಪಾರ್ಕಿಂಗ್ ಆವರಣ, ಡಾರ್ಮೆಟರಿ, ದಾಸೋಹ ಭವನ ಸುತ್ತ ನೀರು ಆವರಿಸಿ ದ್ವೀಪದಂತಾಗಿದೆ.
ಗುಂಡ್ಲು ನದಿಯ ಹರಿವು ಹೆಚ್ಚಾಗಿ ತಡೆಗೋಡೆಯನ್ನು ದಾಟಿ ದೇವಾಲಯದ ಆವರಣದತ್ತ ಪ್ರವಾಹ ನುಗ್ಗಿದೆ. ರಾಘವೇಂದ್ರಸ್ವಾಮಿಗಳ ಮೂಲ ಮಠದ ಬೃಂದಾವನ, ಚಾಮುಂಡೇಶ್ವರಿ, ಕಾಶಿ ವಿಶ್ವೇಶ್ವರನಾಥ, ದತ್ತಾತ್ರೇಯ ಗುಡಿ, ಅಯ್ಯಪ್ಪಸ್ವಾಮಿ, ಪರಶುರಾಮ ದೇವಾಲಯಗಳು ಮುಳುಗಡೆಗೊಂಡಿವೆ. ದೇವಾಲಯಗಳು ಮುಳುಗಡೆಗೊಂಡಿರುವ ಪ್ರದೇಶವನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಮನೆ ಜಲಾವೃತ
ಪ್ರವಾಹಕ್ಕೆ ತುತ್ತಾಗಿರುವ ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರುಬಗೇರಿ, ಸರಸ್ವತಿ ಕಾಲನಿ, ತಾಲೂಕಿನ ಹೆಜ್ಜಿಗೆ, ತೊರೆಮಾವು, ಹುಲ್ಲಹಳ್ಳಿ, ಬೊಕ್ಕಹಳ್ಳಿ, ಸುತ್ತೂರು, ಕುಳ್ಳಂಕಯ್ಯನಹುಂಡಿ, ಕತ್ವಾಡಿಪುರ ಸೇರಿದಂತೆ ಬಹುತೇಕ ಕಡೆ ನೂರಾರು ಮನೆಗಳು ಜಲಾವೃತಗೊಂಡು ಅಪಾರ ನಷ್ಟ ಉಂಟಾಗಿದೆ.
ಚಾಮುಂಡೇಶ್ವರಿ ದೇವಾಲಯ ಬಂದ್
ಕಪಿಲಾ ನದಿ ಪ್ರವಾಹಕ್ಕೆ ಚಾಮುಂಡೇಶ್ವರಿ ದೇವಾಲಯವೂ ಜಲಾವೃತವಾಗಿದ್ದರಿಂದ ಆಷಾಢ ಮಾಸದ ಎರಡನೇ ಶುಕ್ರವಾರ ದರ್ಶನಕ್ಕಾಗಿ ಆಗಮಿಸಿದ ಸಾವಿರಾರು ಭಕ್ತರಿಗೆ ನಿರಾಸೆ ಉಂಟಾಯಿತು. ದೇವಾಲಯ ಆವರಣದ ಸುತ್ತ ಪ್ರವಾಹ ಆವರಿಸಿಕೊಂಡಿದ್ದರಿಂದ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು, ದೂರದಿಂದಲೇ ಭಕ್ತರು ನಮಿಸಿ ತೆರಳಿದರು. ಸಮೀಪದಲ್ಲೇ ಇರುವ ಅಯ್ಯಪ್ಪಸ್ವಾಮಿ ದೇವಾಲಯವೂ ಜಲಾವೃತಗೊಂಡಿತ್ತು.