ತುಂಗಾ-ಭದ್ರಾ ಉಳಿವಿಗೆ ಜಲ ಜಾಗೃತಿ-ಜನ ಜಾಗೃತಿ ಅಭಿಯಾನ

16sri-1
Published on

ಶೃಂಗೇರಿ: ಅಪರೂಪ ಔಷಧಿಯ ಗುಣಗಳನ್ನು ಹೊಂದಿರುವ ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ಹರಿದು ಬರುವ ತುಂಗಾ-ಭದ್ರೆ ನದಿಗಳು ಅಮೃತಕ್ಕೆ ಸಮಾನ ಎಂಬುದು ವೈಜ್ಞಾನಿಕ ಸತ್ಯ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಈ ನದಿಗಳು ಕಲುಷಿತವಾಗುತ್ತಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ ಎಂದು ಶಿವಮೊಗ್ಗ ಪರಿಸರ ಪ್ರೇಮಿ ಗಿರೀಶ್ ಪಟೇಲ್ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಕೇಂದ್ರದಲ್ಲಿ ನಿರ್ಮಲ ತುಂಗಾ-ಭದ್ರಾ ಅಭಿಯಾನದ ಪಾದಯಾತ್ರೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಗರ ಹಾಗೂ ಪಟ್ಟಣಗಳ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರುತ್ತಿದೆ. ಕೃಷಿಯಲ್ಲಿ ಅವೈಜ್ಞಾನಿಕವಾಗಿ ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆ ಕೂಡಾ ಹೆಚ್ಚಾಗುತ್ತಿದೆ. ಸಾರ್ವಜನಿಕರು ತ್ಯಾಜ್ಯವನ್ನು ನದಿಗೆ ಎಸೆಯುವುದು ಹಾಗೂ ಜಲಾನಯನ ಪ್ರದೇಶದಲ್ಲಿ ಅರಣ್ಯನಾಶ ಹೀಗೆ ಹತ್ತು ಹಲವು ಕಾರಣಗಳಿಂದ ತುಂಗಾ-ಭದ್ರಾ ನದಿ ಕಲುಷಿತಗೊಳ್ಳತ್ತಿದೆ. ಹಾಗಾಗಿ ನಿರ್ಮಲ ತುಂಗಾ-ಭದ್ರಾ ಅಭಿಯಾನದ ಮೂಲಕ ಶೃಂಗೇರಿಯಿಂದ ಕಿಷ್ಕಿಂದೆ ತನಕ ನದಿ ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡಲು ನಿಶ್ಚಿಯಿಸಿದ್ದು ಇದರ ಅಂಗವಾಗಿ ನವೆಂಬರ್ ಮೊದಲ ವಾರದಲ್ಲಿ ಬೃಹತ್ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ತುಂಗಾ-ಭದ್ರಾಅಭಿಯಾನದ ಪ್ರಮುಖರಾದ ಕುಮಾರಸ್ವಾಮಿ ಮಾತನಾಡಿ, ನಿರ್ಮಲ ತುಂಗಾ-ಭದ್ರಾ ಅಭಿಯಾನದ ಪಾದಯಾತ್ರೆ ತುಂಗಾ-ಭದ್ರಾ ನದಿಯ ತೀರದಲ್ಲಿ ಬರುವ ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ಹೀರೆಕೆರೂರು, ರಾಣಿಬೆನ್ನೂರು, ಹರಿಹರ, ಹರಪ್ಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಹಾಗೂ ಗಂಗಾವತಿ ತಾಲೂಕುಗಳ ಮೂಲಕ ಸಂಚರಿಸಲಿದೆ ಎಂದರು.
ಪಪಂ ಅಧ್ಯಕ್ಷ ವೇಣುಗೋಪಾಲ್ ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ಉಮೇಶ್ ಪುದುವಾಳ್, ಡಾ.ಲಕ್ಷ್ಮೀಪ್ರಸಾದ್,ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನ, ಕೃಷಿಕರಾದ ತಲಗಾರು ಉಮೇಶ್, ಜಿ.ಜಿ.ಮಂಜುನಾಥ್, ವಕೀಲ ಜಿ.ಎಮ್.ಸತೀಶ್, ಪಪಂ ಮಾಜಿ ಅಧ್ಯಕ್ಷ ಟಿ.ಕೆ ಪರಾಶರ, ನಾಗೇಶ್ ಕಾಮತ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net