

ಮಂಡ್ಯ: ಚರಂಡಿ ಅಥವಾ ಇನ್ನಿತರೆ ಮಲಿನ ನೀರು ಕೆರೆ, ಕಟ್ಟೆಗೆ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಅರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲಿನವಾದ ನೀರು ಕೆರೆ ಅಥವಾ ಕಟ್ಟೆಗೆ ಸೇರಿಸುತ್ತಿರುವ ಪ್ರಕರಣಗಳ ಬಗ್ಗೆ ಸರ್ವೇ ನಡೆಸಿ. ಮುಖ್ಯವಾಗಿ ನೀರಿಗೆ ಸೇರುವ ಮೊದಲು ಸರಿಪಡಿಸಲು ಕ್ರಮ ವಹಿಸಬೇಕು. ಈ ಹಿಂದೆ ಶುದ್ಧ ನೀರು ಕುಡಿಯುವ ಘಟಕಗಳ ಖಾಸಗಿ ಅವರಿಗೆ ನಿರ್ವಹಣೆ ನೀಡಲಾಗಿತ್ತು. ನಿರ್ವಹಣೆ ಅವಧಿ ಮುಕ್ತಾಯವಾಗಿರುವ ಘಟಕಗಳನ್ನು ದುರಸ್ತಿ ಇದ್ದಲ್ಲಿ ಸರಿಪಡಿಸಿ ಮುಂದೆ ನಿರ್ವಹಣೆಗೆ ಪಂಚಾಯಿತಿಗಳಿಗೆ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿರುವ 680 ಶುದ್ಧ ಕುಡಿಯುವ ನೀರಿನ ಘಟಕದ ಪೈಕಿ 290 ಘಟಕಗಳನ್ನು ಪಂಚಾಯಿತಿಗಳಿಗೆ ನಿರ್ವಹಣೆಗೆ ನೀಡಲಾಗಿದೆ ಎಂದರು.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣವಾಗುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಳಚರಂಡಿಗಳಿಂದ ಕನಿಷ್ಟ ಒಂದು ಅಡಿಯಾದರೂ ದೂರವಿರುವಂತೆ ನೋಡಿಕೊಳ್ಳಬೇಕು. ಇನ್ನು ನೀರಿನ ತೊಂಬೆಗಳು ನಿರುಪಯುಕ್ತವಾಗಿದ್ದಲ್ಲಿ ಅವುಗಳನ್ನು ಮುಚ್ಚಬೇಕು. ಒಂದು ವೇಳೆ ಉಪಯೋಗಿಸುತ್ತಿದ್ದಲ್ಲಿ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಈ ಕುರಿತಂತೆ ತಾಲೂಕು ಮಟ್ಟದಲ್ಲಿ ವಾಟರ್‌ಮನ್‌ಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವುದನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಗ್ರಾಮವಾರು ಸರ್ಕಾರದ ವ್ಯಾಪ್ತಿಗೆ ಬರುವ ಕೊಳವೆ ಬಾವಿ ಹಾಗೂ ಖಾಸಗಿ ಕೊಳವೆ ಬಾವಿಗಳು ಹಾಗೂ ಕೊಳವೆ ಬಾವಿಯಲ್ಲಿರುವ ನೀರಿನ ಇಳುವರಿ ಪಟ್ಟಿ ಮಾಡಲಾಗಿದೆ. ಕುಡಿಯುವ ನೀರಿನ ಕೊರತೆ ಉಂಟಾದರೆ ಖಾಸಗಿ ಬೋರ್‌ವೆಲ್ ಅನ್ನು ಬಾಡಿಗೆಗೆ ಪಡೆಯಲಾಗುವುದು. ಹೊಸ ಬೋರ್‌ವೆಲ್ ಕೊರೆಯಲು ಪ್ರಸ್ತಾವನೆ ಬಂದರೆ ಪಟ್ಟಿಯಲ್ಲಿ ಇಳುವರಿ ಪರಿಶೀಲಿಸಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬೋರ್‌ವೆಲ್ಗಳ ಸಂಖ್ಯೆ ಹಾಗೂ ಇಳುವರಿ ಸಮೀಕ್ಷೆ ನಡೆಸಿರುವುದರಿಂದ ಬೋರ್‌ವೆಲ್ ಕೊರೆಯುವುದು ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಪ್ರಮೋದ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಡಾ.ಕೆ.ಪಿ.ಅಶ್ವಥ್, ನೀರು ಬಳಕೆದಾರರ ಸಂಘದ ಮಂಗಲ ಯೋಗೇಶ್ ಇತರರಿದ್ದರು.