

ಮಡಿಕೇರಿ:
ಕಳೆದ ವರ್ಷದಂತೆ ಈ ಬಾರಿಯೂ ಕೊಡಗಿನಲ್ಲಿ ಬಿರು ಬೇಸಿಗೆಯ ಲಕ್ಷಣಗಳು ಕಂಡುಬರುತ್ತಿದೆ. ಇದರ ಪರಿಣಾಮದಿಂದಾಗಿ ಜೀವನದಿ ಕಾವೇರಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಕಡಿಮೆ ಆಗುತ್ತಿದೆ. ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡುಬAದರೂ ಮಳೆ ಬರುವ ಸೂಚನೆಗಳು ಸಿಗುತ್ತಿಲ್ಲ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಸದ್ಯಕ್ಕಂತೂ ಮಳೆ ಬರುವುದಿಲ್ಲ. ಗರಿಷ್ಠ ತಾಪಮಾನ ಕೆಲವೆಡೆ 33-34 ಡಿಗ್ರಿ ಸೆಲ್ಸಿಯಸ್ ತನಕ ತಲುಪಿದೆ.
ಪ್ರಖರ ಬಿಸಿಲು ಮತ್ತು ಹೆಚ್ಚಿನ ತಾಪಮಾನ ಜಲಮೂಲಗಳ ಮೇಲೆ ಪರಿಣಾಮ ಬೀರುತ್ತಿದೆ. ನದಿಗಳಲ್ಲಿ ನೀರಿನ ಹರಿವು ಇಳಿಕೆ ಆಗುತ್ತಿದೆ. ಬೇಸಿಗೆ ಮಳೆ ಬಾರದಿದ್ದರೆ ಕಳೆದ ಬಾರಿಯಂತೆ ನೀರಿನ ಹರಿವು ಸ್ಥಗಿತ ಆಗುವ ಎಲ್ಲ ಸಾಧ್ಯತೆಗಳಿವೆ. ಜಿಲ್ಲೆಯ ವಾಣಿಜ್ಯ ನಗರಿ ಕುಶಾಲನಗರಕ್ಕೆ ಕಾವೇರಿ ನದಿಯೇ ಕುಡಿಯುವ ನೀರಿನ ಪ್ರಮುಖ ಮೂಲ ಆಗಿದ್ದು, ಇಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ.
ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಮತ್ತು ಕುಂಡಮೇಸ್ತಿçಯಲ್ಲಿ ಈಗ ನೀರಿನ ಉತ್ತಮ ಸಂಗ್ರಹ ಇದೆ. ಹಾಗಾಗಿ ಸದ್ಯಕ್ಕೆ ಜಿಲ್ಲಾ ಕೇಂದ್ರಕ್ಕೆ ನೀರಿನ ಸಮಸ್ಯೆ ಆಗಲಿಕ್ಕಿಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಜಲಮೂಲಗಳಲ್ಲಿ ನೀರಿನ ಕೊರತೆಯಿಂದ ಕೇವಲ ಮನುಷ್ಯರಿಗೆ ಮಾತ್ರ ಸಮಸ್ಯೆ ಆಗುತ್ತಿಲ್ಲ. ಪ್ರಾಣಿ, ಪಕ್ಷಿಗಳೂ ತೊಂದರೆ ಎದುರಿಸುವಂತಾಗಿದೆ. ಕಾಡಿನೊಳಗೆ ನೀರು ಸಿಗದಿರುವುದರಿಂದ ಜೀವ ಜಲ ಅರಸಿಕೊಂಡು ವನ್ಯಜೀವಿಗಳು ಜನವಸತಿ ಪ್ರದೇಶದ ಕಡೆಗೆ ನುಗ್ಗುವ ಸಾಧ್ಯತೆ ಇದ್ದು, ಇದರಿಂದಲೂ ಅಪಾಯ ಎದುರಾಗಬಹುದು ಎನ್ನಲಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ವಿಪರೀತ ಬಿಸಿಲಿನಿಂದ ಕುಡಿಯುವ ನೀರಿನ ಮೂಲಗಳು ಬತ್ತುತ್ತಿವೆ. ಪಟ್ಟಣ ಪ್ರದೇಶದ ನಿವಾಸಿಗಳಿಗೆ ಮೊದಲು ಸಮಸ್ಯೆಯಾಗುತ್ತದೆ. ಪಟ್ಟಣ ಪಂಚಾಯಿತಿ, ಪುರಸಭೆಗಳು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು.
ಎಂ.ಎ. ರುಬಿನಾ, ಗೃಹಿಣಿ, ಚೌಡೇಶ್ವರಿ ಬ್ಲಾಕ್, ಸೋಮವಾರಪೇಟೆ.
ಗ್ರಾಮೀಣ ಭಾಗದಲ್ಲಿ ಕೆರೆ, ಕೊಳ್ಳಗಳು ಬತ್ತುತ್ತಿವೆ. ಅಂತರ್ಜಲ ಕಡಿಮೆಯಾಗುವ ಸೂಚನೆಗಳು ಕೊಳವೆ ಬಾವಿಗಳಲ್ಲಿ ಗೊತ್ತಾಗುತ್ತಿದೆ. ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿಗೆ ಸಮಸ್ಯೆಗಳಾಗುವ ಗ್ರಾಮಗಳ ಪಟ್ಟಿ ಮಾಡಿಕೊಳ್ಳಬೇಕು. ಕಾಲೋನಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಸರ್ಕಾರದ ಕೊಳವೆಬಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ದನಕರುಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಗ್ರಾಮಕ್ಕೊಂದು ಜಾನುವಾರು ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು.
ಉತ್ತಯ್ಯ, ಕೃಷಿಕ, ಇನಕನಹಳ್ಳಿ ಗ್ರಾಮ
ವಿಪರೀತ ಬಿಸಿಲಿನ ತಾಪಕ್ಕೆ ನೀರು ಬತ್ತಿ ಹೋಗುತ್ತಿದೆ. ಕುಡಿಯಲು ಮುಂದೆ ನೀರಿಗೆ ಕಾವೇರಿ ತವರಿನಲ್ಲಿ ಬರ ಬರಲಿದೆ. ಕುಡಿಯುವ ನೀರನ್ನು ಯಾರು ಸಹ ದುರ್ಬಳಕೆ ಮಾಡಬಾರದು. ಮಿತವಾಗಿ ಬಳಸಿ, ಜತೆಗೆ ಇಂಗು ಗುಂಡಿ ಮಾಡಿಕೊಳ್ಳುವ ಮೂಲಕ ನೀರಿನ ಮರು ಬಳಕೆ ಮಾಡಬಹುದು.
ಪಾಪಣ್ಣ, ನಿವೃತ್ತ ಶಿಕ್ಷಕ, ಸುಳುಗಳಲೆ, ಶನಿವಾರಸಂತೆ
ಬಿಸಿಲಿನ ಕಾವು ದಿನೇ ದಿನೇ ಏರುತ್ತಿದ್ದು ಸರಿಯಾಗಿ ಮಳೆ ಇಲ್ಲದೇ ಅರಣ್ಯದಲ್ಲಿರುವ ಕೆರೆಯಲ್ಲಿ ನೀರು ಬತ್ತಿದೆ. ಇದರ ಪರಿಣಾಮ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ಉಂಟಾಗಿದೆ. ಪ್ರಾಣಿಗಳು ಆಹಾರ ನೀರು ಅರಸಿಕೊಂಡು ಬಂದು ನಾಡಿನಲ್ಲಿ ಕಾಣಸಿಗುತ್ತಿವೆ.
ಸೂರಜ್, ಕರಡಿಗೋಡು ಗ್ರಾಮ, ಸಿದ್ದಾಪುರ
ಇತ್ತೀಚಿನ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಬೇಸಿಗೆಯ ಸಂದರ್ಭ ನದಿ, ಕೆರೆ, ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿ ಮುಖವಾಗುವುದು ಸಾಮಾನ್ಯ ಎಂಬAತಾಗಿದೆ. ಆದಷ್ಟು ಮಳೆಗಾಲದಲ್ಲಿ ನೀರು ಇಂಗುವAತೆ ಮಾಡಿ ಅಂತರ್ಜಲ ಪ್ರಮಾಣ ಹೆಚ್ಚಿಸಬೇಕು ಹಾಗೂ ಬೇಸಿಗೆಯ ಸಂದರ್ಭ ಆದಷ್ಟು ನೀರಿನ ಮಿತವ್ಯಯ ಮಾಡಬೇಕು. ಅನಾವಶ್ಯಕ ನೀರು ಪೋಲು ಮಾಡದೆ ನೀರನ್ನು ಉಳಿಸುವತ್ತ ಎಲ್ಲರೂ ಗಮನಹರಿಸಬೇಕು.
ಎಂ.ಆರ್. ನಿತಿನ್, ವಿರಾಜಪೇಟೆ
ಕಾವೇರಿಯ ತವರಾದ ಕೊಡಗಿನಲ್ಲಿ ಇತ್ತೀಚೆಗೆ ನದಿ ಮೂಲಗಳು ಒಣಗುತ್ತಿವೆ ಎನ್ನುವುದು ಆತಂಕ ಪಡುವ ಸಂಗತಿ. ಇದಕ್ಕೆ ಮುಖ್ಯ ಕಾರಣ ನೀರಿನ ಅನಾವಶ್ಯಕ ಪೋಲು ಹಾಗೂ ಶುದ್ಧ ನೀರಿನ ಮೂಲಗಳನ್ನು ಮಲೀನ ಮಾಡುತ್ತಿರುವುದು. ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೀರು ಬಳಕೆಯಾಗುತ್ತಿರುವ ಕಾರಣ ನದಿ ಮೂಲಗಳು ಈ ರೀತಿಯಾಗಿ ಒಣಗುತ್ತಿವೆ. ಇನ್ನಾದರೂ ಎಚ್ಚೆತ್ತು ಸರ್ವರೂ ಶುದ್ಧ ನೀರಿನ ಮೂಲಗಳನ್ನು ಉಳಿಸುವತ್ತ ಗಮನಹರಿಸಬೇಕು
ಐ.ಪಿ. ಬಿಂದ್ಯಾ, ವಿರಾಜಪೇಟೆ
ನಾವು ಪರಿಸರ ನಾಶ ಮಾಡುತ್ತಿರುವುದೇ ನದಿಗಳಲ್ಲಿ ನೀರು ಬತ್ತುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ತೋಟಗಳನ್ನು ಮಾಡುವ ನೆಪದಲ್ಲಿ ಮರದ ರೆಂಬೆಗಳು ಮಾತ್ರವಲ್ಲದೆ ಮರಗಳನ್ನೂ ಕಡಿಯಲಾಗುತ್ತಿದೆ. ಕಳ್ಳರೂ ಮರಗಳ ಹನನದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಬೋರ್‌ವೆಲ್ ಕೊರೆಸುವುದು ಕೂಡ ಪರಿಣಾಮ ಬೀರಿದೆ. ಮಳೆಯಾಗದ ಕಾರಣ ತೋಟಗಳಿಗೆ ನದಿಗಳಿಂದ ಅನಿವಾರ್ಯವಾಗಿ ನೀರು ಹಾಯಿಸುತ್ತಿರುವುದರಿಂದಲೂ ನದಿಗಳು ಬತ್ತುತ್ತಿದೆ. ನಮ್ಮ ಅನೇಕ ತಪ್ಪುಗಳಿಂದಾಗಿ ಭೂಮಿಯ ಇಂಗುವಿಕೆಯ ಗುಣವನ್ನೇ ನಾಶ ಮಾಡುತ್ತಿದ್ದೇವೆ.
ಸೂದನ ಎಸ್. ಈರಪ್ಪ, ಅಧ್ಯಕ್ಷ, ಏಲಕ್ಕಿ ಬೆಳೆಗಾರರ ಸಹಕಾರ ಸಂಘ, ಮಡಿಕೇರಿ
ಜಿಲ್ಲೆಯಲ್ಲಿ ಈಗಲೇ ಜಲಕ್ಷಾಮ ತಲೆದೋರಿದೆ. ಇನ್ನು ಎರಡು ತಿಂಗಳು ಬೇಸಿಗೆ ತಾಂಡವ ಆಡಲಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತದವರು ಈಗಿಂದಲೇ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು. ಇಲ್ಲದೇ ಹೋದರೆ ಬೇಸಿಗೆಯಲ್ಲಿ ಜನ ಜಾನುವಾರುಗಳು ನೀರಿನ ಸಮಸ್ಯೆಯಿಂದ ಬಳಲಬೇಕಾಗುತ್ತದೆ.
ಎನ್.ಜಿ. ಸುರೇಶ್, ವಿದ್ಯುತ್ ಗುತ್ತಿಗೆದಾರ, ಗೋಣಿಕೊಪ್ಪಲು
ಸದ್ಯಕ್ಕೆ ನದಿಗಳಲ್ಲಿ ನೀರಿನ ಹರಿವು ಇದೆ. ಕುಶಾಲನಗರ ಪಟ್ಟಣಕ್ಕೆ ಕಾವೇರಿ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಕಟ್ಟೆ ಕಟ್ಟಿ ನೀರು ಸಂಗ್ರಹಿಸಲಾಗಿದೆ. ಒಂದು ವೇಳೆ ನದಿಯಲ್ಲಿ ನೀರಿನ ಹರಿವು ನಿಂತರೆ ನಮ್ಮದೇ ಕೊಳವೆಬಾವಿಗಳಿಂದ ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 2.5 ತಿಂಗಳ ಕಾಲ ಇಂಥ ಸ್ಥಿತಿಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿತ್ತು.
ಎ. ಪ್ರಸನ್ನ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ