

ಮಡಿಕೇರಿ:
ಮಳೆಗಾಲದಲ್ಲಿ ಅಪಾಯಕಾರಿಯಾಗಿ ತುಂಬಿ ಹರಿದಿದ್ದ ಕಾವೇರಿ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಈಗ ಜನವರಿ 2ನೇ ವಾರದಲ್ಲೇ ನೀರಿನ ಹರಿವು ಕಡಿಮೆ ಆಗಿರುವುದು ಕಂಡು ಬರುತ್ತಿದೆ. ಕಳೆದ ವರ್ಷ ಫೆಬ್ರವರಿ ಕೊನೆಯ ವಾರ ಕಾವೇರಿ ನದಿಯಲ್ಲಿ ನೀರಿನ ಹರಿವು ತಳ ಸೇರಿ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ಪಂಪ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಉದ್ಭವಿಸಿತ್ತು. ಜನವರಿಯಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಈ ವರ್ಷವೂ ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ನೀರಿನ ಸಮಸ್ಯೆ ಮರುಕಳಿಸುವ ಆತಂಕ ಕಂಡು ಬರುತ್ತಿದೆ.
ಕೇವಲ ಒಂದು ದಶಕದ ಹಿಂದೆ ಇಂಥ ಪರಿಸ್ಥಿತಿ ಇರಲಿಲ್ಲ. ಮಳೆಗಾಲದಲ್ಲಿ ಜಿಲ್ಲೆಯ ನದಿಗಳು ತುಂಬಿ ಹರಿದವು ಎಂದರೆ ಬೇಸಿಗೆಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದ್ದರೂ ಡಿಸೆಂಬರ್ ಕೊನೆಯ ವಾರದ ನಂತರ ನದಿಗಳಲ್ಲಿ ನೀರಿನ ಮಟ್ಟ ಗಣನನೀಯವಾಗಿ ಇಳಿಯುವುದು ಸಾಮಾನ್ಯ ಎಂಬAತಾಗಿದೆ. ಮಾರ್ಚ್, ಏಪ್ರಿಲ್‌ನಲ್ಲಿ ನದಿಗಳಲ್ಲಿ ನೀರಿನ ಹರಿವು ಸಂಪೂರ್ಣವಾಗಿ ಸ್ತಬ್ಧವಾಗಿಬಿಡುತ್ತದೆ.
ಮಳೆಗಾಲದಲ್ಲಿ ಅಂತರ್ಜಲದ ಇಂಗುವಿಕೆ ಪ್ರಮಾಣ ಕಡಿಮೆ ಆಗಿರುವುದು ಮತ್ತು ನೀರಿನ ಒರತೆಗಳು ಹುಟ್ಟಿಕೊಳ್ಳದಿರುವುದೇ ಈಗಿನ ಈ ಪರಿಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಭತ್ತ ಬೇಸಾಯದ ಪ್ರದೇಶದ ವಿಸ್ತೀರ್ಣ ಇಳಿಮುಖ ಆಗುತ್ತಿರುವುದರಿಂದಲೂ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅವಧಿಗೆ ಮುಂಚೆಯೇ ನದಿಗಳಲ್ಲಿ ನೀರಿನ ಹರಿವು ಕಡಿಮೆ ಆಗಲು ಕಾರಣವಾಗಿರುವ ಅಂಶಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆಯಾಗುವ ನಿರೀಕ್ಷೆಯೂ ಇದೆ. ಒಂದು ವೇಳೆ ಉತ್ತಮ ಮಳೆ ಬಂದರೆ ನೀರಿನ ಸಮಸ್ಯೆ ಒಂದಿಷ್ಟು ದಿನ ಮುಂದಕ್ಕೆ ಹೋಗಬಹುದು. ಹಾಗಾಗಿ ಸಂಭಾವ್ಯ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತವೂ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಒಟ್ಟಾರೆಯಾಗಿ ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಧಾರಾಕಾರ ಮಳೆ ಸುರಿದರೂ ನೀರು ಹರಿದು ಹೋಗುತ್ತಿದೆ. ಹಿಂದೆ ಭತ್ತದ ಗದ್ದೆಯಲ್ಲಿ ಮರ‍್ನಾಲ್ಕು ತಿಂಗಳು ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚುತ್ತಿತ್ತು. ಈಗ ಭತ್ತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇವೆಲ್ಲಾ ಕಾರಣಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಜಲಾ ಕಾಳಪ್ಪ, ಸಾಹಿತಿ, ಸೋಮವಾರಪೇಟೆ.
ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಲಿದೆ ಎನ್ನುವ ಬಗ್ಗೆ ಹವಾಮಾನ ಇಲಾಖೆ ವರದಿ ಇದೆ. ಹೊಳೆ, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಸಿದ್ಧ್ದತೆ ಮಾಡಿಕೊಳ್ಳಬೇಕು. ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲೂ ಪಂಚಾಯಿತಿಗಳು ಸಿದ್ಧತೆ ಮಾಡಿಕೊಳ್ಳಬೇಕು.
ಉತ್ತಯ್ಯ, ಕೃಷಿಕ, ಇನಕನಹಳ್ಳಿ ಗ್ರಾಮ
ಜನವರಿ ತಿಂಗಳಿನ ಆರಂಭದಲ್ಲಿಯೇ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಷ್ಟೇ ಅಲ್ಲದೆ ಕೆರೆ ಬಾವಿಗಳಲ್ಲಿ ನೀರಿನ ಪ್ರಮಾಣ ತಗುತ್ತಿದ್ದು ಈಗಲೇ ಎಚ್ಚೆತ್ತುಕೊಂಡು ನೀರಿನ ಸಮರ್ಪಕ ಬಳಕೆಯ ಕಡೆ ಗಮನಹರಿಸಲಿದ್ದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯ ಹಲವು ಕಡೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ.
ರಿಶಿ ಸೋಮಣ್ಣ, ವಿರಾಜಪೇಟೆ
ಜನವರಿ ತಿಂಗಳಿನಲ್ಲಿಯೇ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಹಾಗೂ ನೀರಿನ ಮೂಲಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಅಂತರ್ಜಲದ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದು ಹಾಗೂ ಮಳೆಯ ನೀರು ಇಂಗದೇ ಹರಿದು ಹೋಗಿ ಪೋಲಾಗುತ್ತಿದೆ. ಈ ಕಾರಣದಿಂದಾಗಿ ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತಿದ್ದು ಬೇಸಿಗೆಯಲ್ಲಿ ಕಾಣಸಿಗುತ್ತಿದ್ದ ನೀರಿನ ಸಮಸ್ಯೆ ಈಗ ಜನವರಿ ತಿಂಗಳಿನಲ್ಲೇ ಉದ್ಭವಿಸಿದಂತಿದೆ. ಇನ್ನು ಮುಂದಾದರೂ ನೀರನ್ನು ಪೋಲು ಮಾಡದೇ ಸಮರ್ಪಕವಾಗಿ, ಎಚ್ಚರಿಕೆಯಿಂದ ಬಳಸುವುದು ಉತ್ತಮ.
ರಾಧಿಕಾ ಎಂ.ಪಿ., ವಿರಾಜಪೇಟೆ.
ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ನೀರನ್ನು ಮಿತವಾಗಿ ಬಳಸಿ ಎಂಬ ಎಚ್ಚರಿಕೆಯನ್ನು ಜಿಲ್ಲಾಡಳಿತ ಪದೇಪದೇ ನೀಡುತ್ತಲೇ ಇದೆ. ಈಗಿನಿಂದಲೇ ನೀರನ್ನು ಮಿತವಾಗಿ ಬಳಸಿದರೆ ಬೇಸಿಗೆ ದಿನಗಳು ಹಿತವಾಗಲಿವೆ. ಈಗ ನಿರ್ಲಕ್ಷ್ಯ ವಹಿಸಿದರೆ ಹನಿ ನೀರಿಗೂ ಪರದಾಡಬೇಕಾಗುವುದು ಕಟ್ಟಿಟ್ಟ ಬುತ್ತಿ.
ಗಿರೀಶ್, ಸಿದ್ದಾಪುರ
ಪ್ರತಿ ವರ್ಷ ಕಾವೇರಿ ತವರೂರು ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿ ಮಾಮೂಲಿ ಎಂಬAತಾಗಿದೆ. ಸಾಮಾನ್ಯವಾಗಿ ಏಪ್ರಿಲ್ ನಂತರ ನೀರಿನ ಸಮಸ್ಯೆ ಆಗುತಿತ್ತು. ಆದರೆ ಇತ್ತೀಚಿಗೆ ಕೆಲವೆಡೆ ಈಗಿನಿಂದಲೇ ಪ್ರಾರಂಭವಾಗಿದೆ. ಸಂಬAಧಪಟ್ಟ ಗ್ರಾಮ ಪಂಚಾಯ್ತಿಗಳು ಕೂಡಲೇ ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ಈಗಲೇ ಪಟ್ಟಿ ಮಾಡಿಕೊಂಡು ಮುಂದೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ.
ಪಾಪಣ್ಣ, ನಿವೃತ್ತ ಶಿಕ್ಷಕ, ಶನಿವಾರಸಂತೆ
ಕೊಡಗಿನಲ್ಲಿ ಕಾವೇರಿ ಸೇರಿದಂತೆ ಹಲವು ನದಿಗಳು ಮಳೆಗಾಲದಲ್ಲಿ ತುಂಬಿ ಹರಿದರೂ, ಬೇಸಿಗೆ ಕಾಲಿಡುತ್ತಿದ್ದಂತೆ ಬರಗಾಲದ ಸ್ಥಿತಿಯನ್ನು ಕೊಡಗು ಅನುಭವಿಸುತ್ತಿದೆ. ಹಿಂದೆ ಕೊಡಗಿನ ಬಹುತೇಕ ಕಡೆ ಭತ್ತ ಬೆಳೆಯುತಿದ್ದಾಗ ಗದ್ದೆಯಲ್ಲಿ ನೀರನ್ನು ತಡೆಯಲಾಗುತ್ತಿತ್ತು .ಇದರಿಂದ ಅಂತರ್ಜಲ ಮಟ್ಟ ಕಾಯ್ದುಕೊಂಡು ನೀರಿನ ಅಭಾವ ಆಗುತ್ತಿರಲಿಲ್ಲ. ಆದರೆ ವಾಣಿಜ್ಯ ಉದ್ದೇಶದಿಂದ ಗದ್ದೆಗಳು ಈಗ ಮಾಯವಾಗಿವೆ. ಜಲಮೂಲಗಳಾದ ಬೆಟ್ಟಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ. ಇದರಲ್ಲಿ ಜನರ, ಅಧಿಕಾರಿಗಳ, ಸರ್ಕಾರದ ಪಾತ್ರವೂ ಇದೆ. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ತಪ್ಪಿದ್ದಲ್ಲ.
ಚಂಡಿರ ಬಸಪ್ಪ, ಕೊಕೇರಿ ಗ್ರಾಮ, ಚೆಯ್ಯಂಡಾಣೆ
ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ಜನವರಿ ತಿಂಗಳಿನಲ್ಲೇ ನೀರಿನ ಹರಿವು ಕ್ಷೀಣವಾಗಿರುವುದು ಆತಂಕದ ವಿಷಯ. ಕಳೆದ ವರ್ಷದ ಕಂಡು ಬಂದ ಬರಗಾಲ ಮಾದರಿಯ ಪರಿಸ್ಥಿತಿ ಈ ವರ್ಷ ಮರುಕಳಿಸದಿರಲಿ ಎನ್ನುವುದನ್ನು ಪ್ರಾರ್ಥಿಸಬೇಕಿರುವುದಷ್ಟೇ ಈಗ ಉಳಿದಿರುವ ದಾರಿ. ಇನ್ನಾದರೂ ನೀರಿನ ಅನಾವಶ್ಯಕ ಬಳಕೆಗೆ ಕಡಿವಾಣ ಹಾಕಬೇಕಿದೆ. ಅಮೂಲ್ಯ ಜೀವ ಜಲದ ಮಿತ ಬಳಕೆ ನಮ್ಮೆಲ್ಲೆರ ಕರ್ತವ್ಯ ಆಗಬೇಕಿದೆ.
ಎನ್.ಕೆ. ಮೋಹನ್ ಕುಮಾರ್, ಸಂಚಾಲಕ, ಆಹಾರ ಅಪವ್ಯಯ ಜಾಗೃತಿ ಆಂದೋಲನ
ಕಳೆದ ವರ್ಷ ನೀರಿನ ಕೊರತೆ ಎದುರಾಗಿದ್ದ ಕುಶಾಲನಗರ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಸಂಬAಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲಾಗಿತ್ತು. ಈ ಬಾರಿ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಮಳೆ ಆಗುವ ನಿರೀಕ್ಷೆ ಇರುವುದರಿಂದ ಹಿಂದಿನ ವರ್ಷದಂತೆ ಪರಿಸ್ಥಿತಿ ನಿರ್ಮಾಣ ಆಗಲಿಕ್ಕಿಲ್ಲ ಎಂದು ಭಾವಿಸಬಹುದು. ಆದರೂ ಸಂಭಾವ್ಯ ನೀರಿನ ಸಮಸ್ಯೆ ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ