ಕಾರ್ಡ್‌ನಲ್ಲಿ ಕರೆನ್ಸಿ ಇಲ್ಲದೆ ನೀರಿಲ್ಲ, ಕರೊನಾ ಭಯಕ್ಕೆ ಸುಳಿಯುತ್ತಿಲ್ಲ ಆರ್‌ಒ ಘಟಕದ ನಿರ್ವಹಣಾ ಸಿಬ್ಬಂದಿ

5-klr-1
Published on

ಕೋಲಾರ: ಶುದ್ಧ ನೀರಿನ ಘಟಕದಲ್ಲಿ ನೀರಿದೆ, ಆದರೆ ನೀರಿನ ಕಾರ್ಡ್‌ನಲ್ಲಿ ಕರೆನ್ಸಿ ಖಾಲಿ...ಇದೀಗ ಕರೆನ್ಸಿ ಇದ್ದವರ ಬಳಿ ಅಂಗಲಾಚುವಂತಾಗಿದೆ ಗ್ರಾಮೀಣರ ಪರಿಸ್ಥಿತಿ...

ಜಿಲ್ಲೆಯಾದ್ಯಂತ ಸರ್ಕಾರ 1099 ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ) ಗಳನ್ನು ಸ್ಥಾಪಿಸಿದೆ. 5 ರೂ. ಗಳಿಗೆ 20 ಲೀಟರ್ ನೀರು ನೀಡಲಾಗುತ್ತದೆ. ಕೆಲ ಘಟಕಗಳಲ್ಲಿ ಕಾಯಿನ್ ವ್ಯವಸ್ಥೆ, ಕೆಲವೆಡೆ ಹಣ ಪಾವತಿ, ಇನ್ನೂ ಕೆಲವೆಡೆ ಕಾರ್ಡ್ ವ್ಯವಸ್ಥೆ ಇದೆ.

ಅಂತೆಯೇ ತಾಲೂಕಿನ ತೊಟ್ಲಿ ಗ್ರಾಮದ ಆರ್‌ಒ ಘಟಕದಲ್ಲಿ ನೀರಿನ ಕಾರ್ಡ್ ವ್ಯವಸ್ಥೆಯಿದೆ. ಗ್ರಾಮದಲ್ಲಿ 200ಕ್ಕೂ ಅಧಿಕ ಕಾರ್ಡ್‌ಗಳಿದ್ದು, ಘಟಕದಲ್ಲಿನ ಯಂತ್ರಕ್ಕೆ ಕಾರ್ಡ್ ಸ್ಪರ್ಶಿಸಿದರೆ 4 ರೂ. ಕರೆನ್ಸಿ ಕಡಿತವಾಗಿ 20 ಲೀಟರ್ ನೀರು ಪಡೆಯಬಹುದು. ಕಾರ್ಡ್‌ನಲ್ಲಿ ಕನಿಷ್ಠ 60 ರೂ. ಮೇಲ್ಪಟ್ಟು ರೀಚಾರ್ಜ್ ಮಾಡಬಹುದು.

ಘಟಕ ಅಳವಡಿಸಿರುವ ಆಂಧ್ರದ ಕಂಪನಿ ಸಿಬ್ಬಂದಿ ಪ್ರತಿ ತಿಂಗಳ 14 ಮತ್ತು 28ರಂದು ಎರಡು ಬಾರಿ ಬಂದು ಕಾರ್ಡ್‌ಗೆ ಪಡೆದು ರೀಚಾರ್ಜ್ ಮಾಡಿಕೊಟ್ಟು ಹೋಗುತ್ತಾರೆ. ಉಳಿದಂತೆ ಘಟಕ ನಿರ್ವಹಣೆ, ಉಸ್ತುವಾರಿ ಗ್ರಾಪಂನ ಜಲಗಾರನದ್ದೇ.

ಕರೊನಾ ಎಫೆಕ್ಟ್: ಯಥಾಪ್ರಕಾರ ಕಂಪನಿ ಸಿಬ್ಬಂದಿ ಮಾ.28ರಂದು ಬರಬೇಕಿತ್ತು, ಲಾಕ್‌ಡೌನ್‌ನಿಂದಾಗಿ ಸಿಬ್ಬಂದಿ ಪತ್ತೆಯಿಲ್ಲ. ಕರೆ ಮಾಡಿದರೆ ಕರೊನಾ ಭಯ, ಲಾಕ್‌ಡೌನ್‌ನಿಂದ ಬರಲು ವಾಹನ ಬಿಡುತ್ತಿಲ್ಲ, ಇಲಾಖೆ ಅಧಿಕಾರಿಯಿಂದ ಅನುಮತಿ ಕೊಡಿಸಿ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನಾಲ್ಕೈದು ದಿನಗಳಿಂದ ಹಲವು ಕಾರ್ಡ್‌ನಲ್ಲಿ ಕರೆನ್ಸಿ ಮುಗಿದಿದ್ದು, ನೀರಿಗಾಗಿ ಕರೆನ್ಸಿ ಇರುವವರ ಬಳಿ ಅಂಗಲಾಚಬೇಕು, ಇಲ್ಲ ಪಕ್ಕದ ಚಿಟ್ನಹಳ್ಳಿ, ಕಾಕಿನತ್ತ ಗ್ರಾಮಕ್ಕೆ ಹೋಗಿ ನೀರು ತರಬೇಕಿದೆ. ಸಮಸ್ಯೆ ಬಗ್ಗೆ ಗ್ರಾಪಂ ಪಿಡಿಒ ಗಮನಕ್ಕೆ ತಂದಿದ್ದು, ಪಿಡಿಒ ಕರೆಗೂ ಸಂಸ್ಥೆಯ ಸಿಬ್ಬಂದಿ ಅದೇ ಉತ್ತರ ನೀಡಿದ್ದಾರೆ. ಸಮಸ್ಯೆ ಬಗೆಹರಿದಿಲ್ಲ, ಜನರು ನೀರಿಗೆ ಪರದಾಡುವುದೂ ತಪ್ಪಿಲ್ಲ.

ಗ್ರಾಮದಲ್ಲಿ ಅನೇಕ ಜನರ ಕಾರ್ಡ್‌ನಲ್ಲಿ ಕರೆನ್ಸಿ ಮುಗಿದಿದ್ದು, ರೀಚಾರ್ಜ್ ಮಾಡಿಸಲು ಕಂಪನಿ ಸಿಬ್ಬಂದಿ ಬರುತ್ತಿಲ್ಲವಾದ್ದರಿಂದ ಯಾರ ಕಾರ್ಡ್‌ನಲ್ಲಿ ಹಣ ಇದೆಯೋ ಅವರನ್ನು ಕೇಳಿಕೊಳ್ಳಬೇಕು, ಲಾಕ್‌ಡೌನ್ ಮುಗಿಯಲು ಇನ್ನೂ 9 ದಿನ ಇದೆ. ಅದುವರೆಗೆ ನೀರಿಗೆ ಪರದಾಡುವುದನ್ನು ತಪ್ಪಿಸಲು ಕಂಪನಿ ಪರ‌್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವೇ ಗ್ರಾಪಂಗೆ ಜವಾಬ್ದಾರಿ ವಹಿಸಬೇಕು. ಟಿ.ವಿ. ರಮೇಶ್, ತೊಟ್ಲಿ ನಿವಾಸಿ ಆರ್‌ಒ ಘಟಕ ಅಳವಡಿಸಿರುವ ಕಂಪನಿಗಳು 5 ವರ್ಷ ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ತೊಟ್ಲಿ ಗ್ರಾಮದಲ್ಲಿ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಕಂಪನಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ವೆಂಕಟಾಚಲಯ್ಯ, ಕಾರ್ಯಪಾಲಕ ಇಂಜಿನಿಯರ್,ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net