ಕೋಲಾರದ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಿ

28-klr-2
Published on

ಕೋಲಾರ: ಬರದ ಜತೆಗೆ ಕರೊನಾ ಭೀತಿಗೆ ಜನತೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒಗಳಿಗೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.

ಶನಿವಾರ ಜಿಪಂನಲ್ಲಿ ನೀರಿನ ವಿಚಾರವಾಗಿ ಜಿಪಂ ಸಿಇಒ ಎಚ್.ವಿ.ದರ್ಶನ್ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಇಒ ಜತೆ ಸಭೆ ನಡೆಸಿ, ಕೋಲಾರ, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ ತಾಲೂಕಿನ ಕೆಲ ಹಳ್ಳಿಗಳಲ್ಲಿ ಮಹಿಳೆಯರು ನೀರಿಗಾಗಿ ಗ್ರಾಮದ ಹೊರ ವಲಯದ ಕೊಳವೆ ಬಾವಿ ಆಶ್ರಯಿಸುತ್ತಿರುವುದಾಗಿ ತಿಳಿದು ಬಂದಿದೆ. ಕರೊನಾ ಹರಡದಂತೆ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ಸರಬರಾಜು ಮಾಡುವಂತೆ ಸಲಹೆ ನೀಡಿದರು.

ಟ್ಯಾಂಕರ್ ಮೂಲಕ ನೀರು ಕೊಡಲು ಸಮಸ್ಯೆ ಇದ್ದಲ್ಲಿ ಅಥವಾ ನೀರಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲು ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಆಯಾ ತಾಲೂಕಿನ ಇಒಗಳು ಮಾಹಿತಿ ಸಂಗ್ರಹಿಸಿ ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದೆಂದು ಸಿಇಒ ಎಚ್.ವಿ.ದರ್ಶನ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಪ್ರಸ್ತುತ ಕೋಲಾರ ತಾಲೂಕಿನಲ್ಲಿ 10, ಶ್ರೀನಿವಾಸಪುರ-3, ಬಂಗಾರಪೇಟೆ-1, ಕೆಜಿಎಫ್‌ನಲ್ಲಿ 4 ಖಾಸಗಿ ಕೊಳವೆ ಬಾವಿಗಳಿಂದ ನೀರು ಒದಗಿಸಲಾಗುತ್ತಿದೆ. ಬರ ಪರಿಹಾರ ನಿಧಿಯಡಿ ಕುಡಿಯುವ ನೀರಿಗೆ ಹಣ ಒದಗಿಸಲು ಯಾವುದೇ ಕೊರತೆ ಇಲ್ಲ ಎಂದರು.

ಕರೊನಾ ಬಗ್ಗೆ ಜಾಗೃತಿ ಮೂಡಿಸಿ: ಜಿಲ್ಲೆಯಲ್ಲಿ ಕರೊನಾ ಕೇಸುಗಳು ಕಂಡು ಬಂದಿಲ್ಲ, ಅದರೂ ಜನರಲ್ಲಿ ಅರಿವು ಮೂಡಿಸಲು ನಿರಂತರ ಪ್ರಯತ್ನ ನಡೆಸಿ, ಹಳ್ಳಿಗಳಲ್ಲಿ ಅಗತ್ಯ ಸೌಕರ್ಯಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ತಾಕೀತು ಮಾಡಿದರು. ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net