ನದಿಗೆ ಕಲುಷಿತ ನೀರು ಬಿಡುವವರಿಗೆ ಎಚ್ಚರಿಕೆ

water
Published on

ಮಡಿಕೇರಿ:

ಕಾವೇರಿ ನದಿ ತೀರದ ಹೋಟೆಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಪಂಚಾಯಿತಿ ವ್ಯಾಪ್ತಿಯ ರಸಲ್ಪುರ, ಚಿಕ್ಕಬೆಟಗೇರಿ ಹಾಗೂ ಬಸವನಹಳ್ಳಿ ಗ್ರಾಮದ ವಾಣಿಜ್ಯ ಉದ್ದಿಮೆಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಲಿನ ನೀರನ್ನು ನೇರವಾಗಿ ಚರಂಡಿಗಳ ಮೂಲಕ ನದಿಗಳಿಗೆ ಹರಿಸುತ್ತಿರುವ ಉದ್ದಿಮೆದಾರರಿಗೆ ಲೈಸೆನ್ಸ್ ಅನ್ನು ರದ್ದು ಪಡಿಸುವ ಎಚ್ಚರಿಕೆ ನೀಡಲಾಯಿತು. ಇವರಿಗೆಲ್ಲಾ 15 ದಿನಗಳ ಕಾಲಾವಕಾಶ ನೀಡಿದ್ದು ಈ ಅವಧಿಯಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಿ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡುವ ಬಗ್ಗೆ ತಿಳಿ ಹೇಳಲಾಯಿತು

ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಸುತ್ತಿರುವುದನ್ನು ಈ ಸಂದರ್ಭದಲ್ಲಿ ಖಾತ್ರಿಪಡಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅನಧಿಕೃತವಾಗಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿರುವ ಉದ್ದಿಮೆದಾರರಿಗೆ ಹಾಗೂ ವಾರ್ಷಿಕ ತೆರಿಗೆ ಪಾವತಿಸದಿರುವ ವರ್ತಕರಿಗೆ ನೋಟಿಸ್ ಜಾರಿ ಮಾಡಲಾಯಿತು.

ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಸದಸ್ಯರಾದ ಶಿವಪ್ಪ, ಪ್ರದೀಪ್, ಉಮಾ , ಚಿದಾನಂದ , ಸುಶೀಲ, ಯಶೋಧ, ಸರ್ವ ಮಂಗಳ, ನಿತ್ಯಾನಂದ, ಗಂಗಮ್ಮ, ಕಾರ್ಯದರ್ಶಿ ಕುಮಾರಸ್ವಾಮಿ, ಕರವಸೂಲಿಗಾರ ಸಮಂತ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net