ಸದಭಿರುಚಿ ಸಿನಿಮಾ ವೀಕ್ಷಿಸುವುದು ಉತ್ತಮ ಪುಸ್ತಕ ಓದುವುದಕ್ಕೆ ಸಮ

5 smg 1
ಅಶೋಕ್ ಕಶ್ಯಪ್ ಅವರನ್ನು ಕುವೆಂಪು ವಿವಿ ಪರವಾಗಿ ಸನ್ಮಾನಿಸಲಾಯಿತು. ಪ್ರೊ.ಎಸ್.ವೆಂಕಟೇಶ, ಡಾ.ಎಂ.ಆರ್.ಸತ್ಯಪ್ರಕಾಶ್, ಡಾ.ರುಮಾನಾ ತನ್ವೀರ್, ಸತೀಶ್ ಕುಮಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಚಲನಚಿತ್ರ ಎಂಬುದು ಕೇವಲ ಮನರಂಜನೆಯ ಮಾಧ್ಯಮವಲ್ಲ. ನೋಡುಗರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವ, ಸಾಮಾಜಿಕ ಬದಲಾವಣೆ ತರುವ ಸಾಮರ್ಥ್ಯವುಳ್ಳ ಸಶಕ್ತ ಮಾಧ್ಯಮ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ.ಎಸ್.ವೆಂಕಟೇಶ ಹೇಳಿದರು.

ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ಐದು ದಿನಗಳ 14ನೇ ಸಹ್ಯಾದ್ರಿ ಸಿನಿಮೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರಗಳು ಸಾಮಾಜಿಕ ಬದಲಾವಣೆ ಸಾಧನಗಳು ಎನ್ನುವುದಕ್ಕೆ ಕನ್ನಡವೂ ಸೇರಿದಂತೆ ಜಾಗತಿಕ ರಂಗದಲ್ಲಿ ಹಲವು ನಿದರ್ಶನಗಳಿವೆ ಎಂದರು.
ರಾಜ್‌ಕುಮಾರ್ ನಟನೆಯ ಬಂಗಾರದ ಮನುಷ್ಯ ಸಿನಿಮಾ ಗ್ರಾಮೀಣಾಭಿವೃದ್ಧಿಯಲ್ಲಿ ದೊಡ್ಡ ಆಂದೋಲನಕ್ಕೆ ಕಾರಣವಾಗಿತ್ತು. ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲೂ ಹೆಸರು ಮಾಡುತ್ತಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಂದೇಶ ಸಾರುವ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿವೆ ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಪೂರ್ಣಾನಂದ ಮಾತನಾಡಿ, ಸಿನಿಮಾವನ್ನು ವೀಕ್ಷಿಸಿ ಮನರಂಜನೆ ಪಡೆಯುವುದಕ್ಕೆ ಸೀಮಿತವಾಗದೆ ಅದರಲ್ಲಿರುವ ವಿಚಾರಗಳನ್ನು ಚರ್ಚಿಸುವುದು ಅವಶ್ಯ. ಒಂದು ಸದಭಿರುಚಿಯ ಸಿನಿಮಾ ವೀಕ್ಷಿಸುವುದು ಒಂದು ಉತ್ತಮ ಪುಸ್ತಕ ಓದುವುದಕ್ಕೆ ಸಮವಾಗಿರುತ್ತದೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಚಿತ್ರ ಸಂಗಾತಿ ಸಿನಿಮಾ ಸೊಸೈಟಿಯನ್ನು ಛಾಯಾಗ್ರಹಕ ಅಶೋಕ್ ಕಶ್ಯಪ್ ಲೋಕಾರ್ಪಣೆಗೊಳಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಡಾ.ಎಂ.ಆರ್.ಸತ್ಯಪ್ರಕಾಶ್, ಉಪನ್ಯಾಸಕರಾದ ಪ್ರೊ.ಸತೀಶ್ ಕುಮಾರ್, ಪ್ರೊ.ಪಿ.ಎ.ವರ್ಗೀಸ್, ಡಾ. ರುಮಾನಾ ತನ್ವೀರ್, ಜೆ.ಪಿ.ವಿನಯ್ ಉಪಸ್ಥಿತರಿದ್ದರು.

ಕಾಂತಾರ ಕನವರಿಕೆ
ಸಿನಿಮಾ ಒಂದು ಜಾಗತಿಕವಾದ ಅಂಶ. ಅದಕ್ಕೆ ಉತ್ತಮ ಉದಾರಹಣೆ ಕನ್ನಡದ ಕಾಂತಾರ ಸಿನಿಮಾ. ಇದು ಸ್ಥಳೀಯ ಸಂಸ್ಕೃತಿ ಆಧಾರಿತ ಸಿನಿಮಾವಾದರೂ ನಿರ್ದೇಶಕ ಕಥೆ ಹೇಳುವ ಶೈಲಿಯಿಂದ ಸಿನಿಮಾ ದೇಶ, ವಿದೇಶದಲ್ಲೂ ಹೆಸರು ಮಾಡಿತು. ಇತ್ತೀಚೆಗೆ ಸ್ಥಳೀಯ ಕಥೆಗಳು ಜಾಗತಿಕವಾಗಿ ಜನಮನ್ನಣೆ ಪಡೆಯುತ್ತಿವೆ. ಬಾಲಿವುಡ್ ಕೂಡಾ ದಕ್ಷಿಣ ಭಾರತದ ಸಿನಿಮಾಗಳ ಕಡೆ ನೋಡುತ್ತಿದೆ ಎಂದು ಅಶೋಕ್ ಕಶ್ಯಪ್ ಹೇಳಿದರು. ಕೇವಲ ಕೌಶಲ್ಯದಿಂದ ಸಿನಿಮಾಟೋಗ್ರಫಿ ಪೂರ್ಣವಾಗುವುದಿಲ್ಲ. ಅದರ ಜತೆ ತಂತ್ರಜ್ಞಾನದ ಬಗ್ಗೆ ಅರಿವು ಅಗತ್ಯ. ಕರ್ನಾಟಕದಲ್ಲಿ ೨೩ ವರ್ಷಗಳ ಹಿಂದೆ ಡಿಜಿಟಲ್ ಸಿನಿಮಾಟೋಗ್ರಫಿ ಆರಂಭವಾಯಿತು. ಆ ವೇಳೆ ತಂತ್ರಜ್ಞಾನದ ಜತೆ ನಡೆದವರು ಮಾತ್ರ ಸಿನಿಮಾಟೋಗ್ರಫಿಯನ್ನು ಮುಂದುವರಿಸಿದರು ಎಂದು ವಿವರಿಸಿದರು.

ಚಿತ್ರ ಸಂಗಾತಿ ಸಿನಿಮಾ ಸೊಸೈಟಿ ಜಾಗತಿಕವಾಗಿ ಹೆಚ್ಚು ಹೆಸರು ಮಾಡಿರುವ, ಚಿತ್ರಮಂದಿರಗಳಲ್ಲಿ ಪ್ರಸಿದ್ಧಿ ಪಡೆಯದೇ ಇರುವ ಸಿನಿಮಾಗಳನ್ನು ಪ್ರದರ್ಶಿಸಲಿದೆ. ಬದುಕಿಗೆ ಸಮೀಪದ ಕಥೆಯುಳ್ಳ, ಕಲಾತ್ಮಕ ಸಿನಿಮಾಗಳನ್ನು ಸಿನಿಮಾ ಸೊಸೈಟಿಯಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಸಿನಿಮಾ ವಿಮರ್ಶೆಯ ಬಗ್ಗೆ ಆಸಕ್ತಿ ಮೂಡಿಸಲಾಗುವುದು.ಡಾ.ಎಂ.ಆರ್.ಸತ್ಯಪ್ರಕಾಶ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net