

ಮದ್ದೂರು: ದೇಶದ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಮತ್ತು ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಇದನ್ನು ಅರಿಯದ ಕೇಂದ್ರ ಸಚಿವರು ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ ಜರಿದರು.
ವಿರೋಧ ಪಕ್ಷದವರನ್ನು ವಿರೋಧಿಸಲೆಂದೇ ಟೀಕಿಸುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಲಹರಣ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಸರಿಸುಮಾರು ಶೇ. 5ರಷ್ಟು ಸುಳ್ಳನ್ನು ಹೇಳಬಹುದಾದರೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೂರಕ್ಕೆ ಇನ್ನೂರರಷ್ಟು ಸುಳ್ಳುಗಳನ್ನು ಹೇಳುವ ಮೂಲಕ ಹಾಸ್ಯಾಸ್ಪದಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಎಂದು ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಶೇ.60ರಷ್ಟು ಕಮಿಷನ್ ಎಂದು ಟೀಕಿಸಿರುವ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. ಅವರು ಈ ಹಿಂದೆ ಇಂತಹ ಕೃತ್ಯಗಳಿಗೆ ಒತ್ತು ನೀಡಿರುವ ಅಭ್ಯಾಸದಿಂದಾಗಿ ಈಗಲೂ ಅದನ್ನೇ ಪ್ರತಿಪಾದಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಛೇಡಿಸಿದರು.
ಕೆಎಸ್‌ಆರ್‌ಟಿಸಿ ಬಸ್ ದರ ಹೆಚ್ಚಳ ಕುರಿತು ಸ್ಪಷ್ಟನೆ ನೀಡಿದ ಶಾಸಕರು, ಕಳೆದ 10 ವರ್ಷಗಳಿಂದಲೂ ಬಸ್ ಟಿಕೆಟ್ ದರ ಏರಿಕೆ ಆಗಿಲ್ಲ. ಪೆಟ್ರೋಲಿಯಂ ಉತ್ಪನ್ನಗಳು, ಬಿಡಿ ಭಾಗಗಳು, ನಿರ್ವಹಣಾ ವೆಚ್ಚ ಇನ್ನಿತರ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಟಿಕೇಟ್ ದರ ಹೆಚ್ಚಿಸಿರುವುದಾಗಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.