

ಕೊಟ್ಟೂರು: ಚಿರಬಿ ಸಮೀಪದ ಬ್ಲೂಸಂ ಶೋವರ್ಸ್ ಆಗ್ರೋ ಸೌತೆ ಸೀಡ್ಸ್ (ಬಿಎಸ್‌ಎಎಸ್‌ಎಸ್) ಕಂಪನಿ ವಿಷಯುಕ್ತ ತ್ಯಾಜ್ಯ ನೀರನ್ನು ಹೊರಬಿಡುವುದರಿಂದ ಪರಿಸರ ಮಾಲಿನ್ಯ ಹಾಗೂ ರೈತರ ಭೂಮಿ ಹಾಳಾಗುತ್ತಿದೆ ಎಂದು ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ರೈತರು ದೂರು ನೀಡಿದರು.
ರೈತರ ವಿರೋಧ ನಡುವೆಯೇ ಕಂಪನಿಯು ಸೌತೆ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ಸೌತೆಕಾಯಿ ಸಂಸ್ಕರಣೆ ಮಾಡಿದ ನೀರು ಹೊಲಗಳಿಗೆ ಹರಿಯುವುದರಿಂದ ಸಂಪೂರ್ಣ ವಿಷಯುಕ್ತವಾಗಿದೆ. ಇದರಿಂದ ಬೆಳೆ ಬೆಳೆಯುವುದು ಕಷ್ಟವಾಗಿದೆ. ಇನ್ನೊಂದೆಡೆ ನೀರಿನ ದುರ್ವಾಸನೆಯಿಂದ ಕೃಷಿ ಚಟುವಟಿಕೆ ಮಾಡಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಡಿಸಿ ದಿವಾಕರ ಅವರು, ಸ್ಥಳ ಪರಿಶೀಲನೆ ಮಾಡಿ. ನೀರನ್ನು ಪ್ರಯೋಗಾಲಯಕ್ಕೆ ಕಳಿಸಿ. ನೀರು ವಿಷಯುಕ್ತವಾಗಿದೆಂದು ದೃಢಪಟ್ಟರೆ ಕಂಪನಿಯ ಸೌತೆ ಸಂಸ್ಕರಣಾ ಘಟಕವನ್ನು ಶಾಶ್ವತವಾಗಿ ಬಂದ್ ಮಾಡಿಸಿ ಎಂದು ತಾಪಂ ಇಒ ರವಿಕುಮಾರ್ ಹಾಗೂ ಪಿಡಿಒ ಉಮಾಪತಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ಕಾನೂನು ವಿರುದ್ಧವಾಗಿ ಇಂದು ಕಾಲೇಜ್ ಸೇರಿ ಒಂದೇ ಕಾಂಪೌಂಡ್‌ನಲ್ಲಿ ಎರಡು ಮಹಾವಿದ್ಯಾಲಯಗಳಿವೆ. ಈವರೆಗೆ ಟ್ಯಾಕ್ಸ್ ಸಹ ಕಟ್ಟಿಲ್ಲವೆಂದು ಪ್ರದೀಪ್ ಭೂಸನೂರಮಠ ಎನ್ನುವರು ಡಿಸಿ ಗಮನಕ್ಕೆ ತಂದರು. ಈ ಸಂಬಂಧ ಪಪಂ ಮುಖ್ಯಾಧಿಕಾರಿ ನಸರುಲ್ಲಾರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಕಾಲೇಜ್‌ಗೆ ನೋಟಿಸ್ ನೀಡಿ ಪೂರ್ಣ ಪ್ರಮಾಣದಲ್ಲಿ ತೆರಿಗೆ ಕಟ್ಟಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಪರವಾನಗಿ ಇಲ್ಲದೆ ರಕ್ತ ಪರೀಕ್ಷಾ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಅಧಿಕ ಹಣ ವಸೂಲಿ ಮಾಡುತ್ತಿವೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಅನಧಿಕೃತವಾಗಿ ರಕ್ತ ಪರೀಕ್ಷೆ ಮಾಡುವವರ ವಿರುದ್ಧ ಕೇಸ್ ದಾಖಲಿಸುವಂತೆ ಟಿಎಚ್‌ಒ ಡಾ.ಪ್ರದೀಪ್‌ಗೆ ಡಿಸಿ ಸೂಚಿಸಿದರು. ಇ-ಸ್ವತ್ತು ಅಭಿಯಾನ ಆರಂಭಿಸಿ ಮನೆ ಮನೆಗೆ ದಾಖಲೆ ಸಲ್ಲಿಸಬೇಕು ಎಂದು ಪಿಡಿಒ, ಬಿಲ್ ಕಲೆಕ್ಟರ್‌ಗಳಿಗೆ ತಾಕೀತು ಮಾಡಿದರು.
ಧಾರ್ಮಿಕ ದತ್ತಿ ಇಲಾಖೆಯಿಂದ ಗೋಶಾಲೆ ಆರಂಭಿಸಲು ಅವಕಾಶವಿಲ್ಲವೆಂದು ಮನವಿಯೊಂದಕ್ಕೆ ಉತ್ತರಿಸಿದರು. ಕಚೇರಿಗೆ ಗೈರಾಗುವ ನಿಂಬಳಗೆರೆ, ಕೋಗಳಿ ಗ್ರಾಪಂ ಪಿಡಿಒಳಿಗೆ ನೋಟಿಸ್ ನೀಡುವಂತೆ ತಾಪಂ ಇಒಗೆ ಸೂಚಿಸಿದರು.
ಶಾಸಕ ನೇಮಿರಾಜ್ ನಾಯ್ಕ ಮಾತನಾಡಿ, ಇನ್ನೈದು ವರ್ಷದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ 125 ಅರ್ಜಿಗಳ ಪೈಕಿ 12 ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ತಹಸೀಲ್ದಾರ್ ಜಿ.ಕೆ.ಅಮರೇಶ, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಇದ್ದರು.