

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆಯಾಗುವ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂ ಸೇರುತ್ತಿದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಯೊಬ್ಬರಿಂದ ವಾಸ್ತವ ಸ್ಥಿತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ನಿರ್ದೇಶಿಸಿದೆ.
ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶಗಳಲ್ಲಿನ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತಗಳಿಗೆ ಸಂಬಂಧಿಸಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದೆ.
ಸಿಜೆ ಎ.ಎಸ್.ಓಕ್ ಹಾಗೂ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣನವರ್ ಅವರಿದ್ದ ಪೀಠ ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿತು. ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಜೂನ್ 24ಕ್ಕೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯನ್ನು ಪ್ರಾಧಿಕಾರ ಪರ ವಕೀಲ ಶ್ರೀಧರ ಪ್ರಭು ನ್ಯಾಯಪೀಠಕ್ಕೆ ಸಲ್ಲಿಸಿದರು. ಪರಿಶೀಲಿಸಿದ ಪೀಠ, ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂ ಸೇರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ, ಪರಿಸರ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಸ್ಥಿತಿ ಪರಿಶೀಲಿಸಿ, ವಾರದೊಳಗೆ ವರದಿ ತರಿಸಿಕೊಂಡು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಕೆಎಸ್‌ಪಿಸಿಬಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.
ವರದಿಯಲ್ಲೇನಿದೆ?: ಜನರ ದೂರು ಆಧರಿಸಿ ಜೂನ್ 23ರಂದು ಪಚ್ಚನಾಡಿ ಹಾಗೂ ಮಂದಾರ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಶ್ರೀಮಂತ ಶ್ರೀ ರಾಜಗುಳಿಗ ದೈವಸ್ಥಾನದವರೆಗೆ 2ರಿಂದ 3 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಪರಿಸ್ಥಿತಿ ಅವಲೋಕಿಸಲಾಯಿತು. ಎರಡು ಕಡೆ ಶುದ್ಧ ನೀರಿನಲ್ಲಿ ಕಪ್ಪು ಬಣ್ಣದ ನೀರು ಸೇರುತ್ತಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಕಪ್ಪು ಬಣ್ಣದ ಕಲುಷಿತ ನೀರು ಫಲ್ಗುಣಿ ನದಿ ಸೇರುತ್ತಿದೆ. ಫಲ್ಗುಣಿ ನದಿಗೆ ಹೊಂದಿಕೊಂಡಂತೆ ಮರವೂರು ಡ್ಯಾಂ ನಿರ್ಮಿಸಿದ್ದು, ಡ್ಯಾಂ ಮೂಲಕ ಮಂಗಳೂರು ನಗರ ಹಾಗೂ ಸುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.
ಈ ಭಾಗದ ಪ್ರತಿ ಹಳ್ಳ ಹಾಗೂ ಉಪ ನದಿ ಫಲ್ಗುಣಿ ನದಿ ಸೇರುತ್ತದೆ. ಇದೇ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಜನ ಆತಂಕದಲ್ಲಿದ್ದಾರೆ. ಕಲುಷಿತ ನೀರಿನಿಂದ ಕಾಯಿಲೆಗಳು ಹರಡುವ ಸಾಧ್ಯತೆ ಆತಂಕಕ್ಕೆ ಕಾರಣವಾಗಿದೆ. ಕಲುಷಿತ ನೀರು ನದಿಗೆ ಸೇರುವುದರಿಂದ ಮಾನವ ನಿರ್ಮಿತ ವಿಪತ್ತು ನಿರ್ಮಾಣವಾಗಲಿದೆ. ಫಲ್ಗುಣಿ ನದಿ ಮಲಿನಗೊಳ್ಳುವ ಜತೆಗೆ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.