

ಹರೀಶ್ ಮೋಟುಕಾನ ಮಂಗಳೂರು
ಪಚ್ಚನಾಡಿ ರೇಚಕ ಸ್ಥಾವರ ಬಳಿ ಮ್ಯಾನ್‌ಹೋಲ್ ಬ್ಲಾಕ್ ಆಗಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ನೀರು ನದಿಗೆ ಸೇರುತ್ತಿದ್ದು, ಈ ನದಿ ಒಂಬತ್ತು ಗ್ರಾಮಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಮರವೂರು ಡ್ಯಾಂಗೆ ಸೇರುತ್ತಿದೆ.
ಈ ರೇಚಕ ಸ್ಥಾವರ ಬಳಿ ಎರಡು ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿ ಮೂರು ಅಡಿಯಷ್ಟು ತ್ಯಾಜ್ಯ ನೀರು ತುಂಬಿಕೊಂಡಿದೆ. ಅಲ್ಲಿಂದ ನದಿ ಮೂಲಕ ಮರವೂರು ಡ್ಯಾಂ ಸೇರುತ್ತಿದೆ. ಇದು ಒಳ ಪ್ರದೇಶದಲ್ಲಿರುವ ಕಾರಣ ಜನರ ಗಮನಕ್ಕೆ ಬಂದಿಲ್ಲ. ಮ್ಯಾನ್‌ಹೋಲ್‌ನಿಂದ ರಭಸವಾಗಿ ನೀರು ಉಕ್ಕಿ ಹರಿದು ಡಾಂಬರು ರಸ್ತೆಯೇ ಕೊಚ್ಚಿ ಹೋಗಿದೆ.
ಈ ಹಿಂದೆ ಪಚ್ಚನಾಡಿ ರೇಚಕ ಸ್ಥಾವರದ ಕಲುಷಿತ ನೀರನ್ನು ಶುದ್ಧೀಕರಿಸದೆ ಡ್ಯಾಂಗೆ ಬಿಡುತ್ತಿರುವ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಗೆ ದೂರು ಹೋಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗ ಮತ್ತೆ ತ್ಯಾಜ್ಯ ನೀರು ದೊಡ್ಡ ಪ್ರಮಾಣದಲ್ಲಿ ನದಿ ಸೇರುತ್ತಿದೆ.
ಜನರೇ ಎಚ್ಚರಿಕೆ ವಹಿಸಬೇಕು: ಕೊಳಚೆ ನೀರು ನದಿಗೆ ಹರಿದು ಮರವೂರು ಡ್ಯಾಂಗೆ ಸೇರುತ್ತದೆ. ಈ ನೀರನ್ನು ಒಂಬತ್ತು ಗ್ರಾಮಗಳ ಜನ ಕುಡಿಯಲು ಬಳಸುತ್ತಾರೆ. ತ್ಯಾಜ್ಯಯುಕ್ತ ನೀರು ಕುಡಿಯುವ ಜನರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀಳಬಹುದು ಎಂಬುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಯೋಚಿಸಿಲ್ಲ. ಡ್ಯಾಂ ನೀರು ಬಳಕೆ ಮಾಡುವ ಜನರೇ ಎಚ್ಚರಿಕೆ ವಹಿಸಬೇಕಾಗಿದೆ. ಈ ನೀರು ಪರೀಕ್ಷೆಗೊಳಪಡಿಸಿಯೇ ಕುಡಿಯಲು ಬಳಕೆ ಮಾಡುವುದು ಉತ್ತಮ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
ದೂರು ಕೊಟ್ಟರೂ ನಿರ್ಲಕ್ಷೃ: ನದಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿರುವುದರಿಂದ ತ್ಯಾಜ್ಯ ನೀರು ಸೇರುತ್ತಿರುವುದು ಗಮನಕ್ಕೆ ಬರುವುದಿಲ್ಲ. ರೇಚಕ ಸ್ಥಾವರದ ಅವೈಜ್ಞಾನಿಕ ನಿರ್ವಹಣೆಯೇ ಈ ಅವ್ಯವಸ್ಥೆಗೆ ಕಾರಣ. ರೇಚಕ ಸ್ಥಾವರ ಬಳಿಗೆ ಹೋಗಿ ನೋಡಿದಾಗಷ್ಟೇ ನೈಜ ಸ್ಥಿತಿ ಅರಿವಾಗುತ್ತದೆ. ಹಲವು ಬಾರಿ ದೂರುಗಳು ಬಂದ ಬಳಿಕವೂ ಮಹಾನಗರ ಪಾಲಿಕೆ ಪಚ್ಚನಾಡಿ ರೇಚಕ ಸ್ಥಾವರದ ಬಗ್ಗೆ ನಿರ್ಲಕ್ಷೃ ಧೋರಣೆ ತಾಳಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಸ್ಥಳೀಯ ಪಾಲಿಕೆ ಸದಸ್ಯೆ ಈ ಬಗ್ಗೆ ಗಮನ ಹರಿಸಬೇಕಾಗಿದ್ದು, ಲಕ್ಷಾಂತರ ಜನ ಕುಡಿಯಲು ಉಪಯೋಗಿಸುವ ನೀರಿಗೆ ಇಂಥ ತ್ಯಾಜ್ಯ ನೀರು ಬಿಡುವುದನ್ನು ನಿಲ್ಲಿಸಬೇಕು.
ಪಚ್ಚನಾಡಿ ವೆಟ್‌ವೆಲ್ ಬಳಿ ಮ್ಯಾನ್‌ಹೋಲ್ ಬ್ಲಾಕ್ ಆಗಿ ತ್ಯಾಜ್ಯ ನೀರು ಸೋರಿಕೆಯಾಗುವುದು ಗಮನಕ್ಕೆ ಬಂದ ತಕ್ಷಣ ಮಹಾನಗರ ಪಾಲಿಕೆಯ ಸಂಬಂಧಿತ ಇಂಜಿನಿಯರ್ ಅವರಿಗೆ ಪರಿಶೀಲಿಸಲು ಹೇಳಿದ್ದೇನೆ. ಬುಧವಾರ ಮೇಯರ್ ಜತೆ ಆ ಭಾಗದಲ್ಲಿ ಪರಿಶೀಲನೆಗೆ ಹೋಗಿದ್ದಾಗ ಎಲ್ಲವೂ ಸರಿಯಾಗಿತ್ತು. ರಾತ್ರಿ ಮಳೆಯಾದ ಕಾರಣ ಮ್ಯಾನ್‌ಹೋಲ್ ಬ್ಲಾಕ್ ಆಗಿರುವ ಸಾಧ್ಯತೆ ಇದೆ. ಸಂಗೀತಾ ನಾಯಕ್ ಮಹಾನಗರ ಪಾಲಿಕೆ ಸದಸ್ಯೆ ಪಚ್ಚನಾಡಿ