

ಗಂಗೊಳ್ಳಿ: ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ-ಗುಜ್ಜಾಡಿ ಮುಖ್ಯ ರಸ್ತೆಯ ಹೊಸಾಡು ಗೇರು ಅಭಿವೃದ್ಧಿ ನಿಗಮಕ್ಕೆ ಒಳಪಟ್ಟ ಗೇರು ಪ್ಲಾಂಟೇಶನ್ ಸಮೀಪ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಗೂಡ್ಸ್ ಗಾಡಿಯಲ್ಲಿ ಕಸ ಮತ್ತು ತ್ಯಾಜ್ಯವನ್ನು ತಂದು ಹಾಕುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಗೂಡ್ಸ್ ಗಾಡಿಯನ್ನು ಅಡ್ಡಗಟ್ಟಿ ಅವರಿಂದಲ್ಲೇ ಕಸ ಮತ್ತು ತ್ಯಾಜ್ಯವನ್ನು ಮರಳಿ ಗಾಡಿಗೆ ತುಂಬಿಸಿ ಕಳುಹಿಸಿದ್ದಾರೆ.
ಹಲವಾರು ತಿಂಗಳಿನಿಂದ ಗುಜ್ಜಾಡಿ-ಮುಳ್ಳಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯುವ ಕೆಲಸ ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುಜ್ಜಾಡಿ ಗ್ರಾಪಂ. ಸಿಸಿ ಕ್ಯಾಮೆರಾವನ್ನು ಅಳವಡಿಸಿತ್ತು. ಆದರೆ ತ್ಯಾಜ್ಯ ಎಸೆಯುವುದು ಮಾತ್ರ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ವಿಜಯವಾಣಿ ಅನೇಕ ಬಾರಿ ವಿಸ್ತೃತ ವರದಿ ಪ್ರಕಟಿಸಿತ್ತು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ತಾಪಂ ಸದಸ್ಯ ನಾರಾಯಣ ಕೆ.ಗುಜ್ಜ್ಜಾಡಿ ಇನ್ನು ಮುಂದೆ ಈ ರೀತಿ ಕೆಲಸ ಮಾಡಬೇಡಿ ಎಂದು ಬುದ್ಧಿಮಾತನ್ನು ಹೇಳಿ ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದ್ದಾರೆ.